ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ನಿಗದಿಪಡಿಸಿ: ಅಧಿಕಾರಿಗಳಿಗೆ ಶಾಸಕ ರವಿಕುಮಾರ್ ಗಣಿಗ ಸೂಚನೆ

Verification of government land in Kallahalli Mandya
Published on

ಮಂಡ್ಯ: ನಗರದ ಕಲ್ಲಹಳ್ಳಿ ಗ್ರಾಮದ ಸರ್ವೇ ನಂಬರ್ 391ರಿಂದ 395 ವರೆಗಿನ 111 ಗುಂಟೆ ಸರ್ಕಾರಿ ಜಮೀನಿನ ಸರ್ವೇ ಕಾರ್ಯ ನಡೆಸಿ ಹದ್ದುಬಸ್ತು ನಿಗದಿ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ರವಿಕುಮಾರ್ ಗಣಿಗ ಸೂಚಿಸಿದರು.

ಕಲ್ಲಹಳ್ಳಿ ಗ್ರಾಮಸ್ಥರೊಡನೆ ಸರ್ಕಾರಿ ಜಮೀನು ವೀಕ್ಷಣೆ ನಡೆಸಿದ ಶಾಸಕರು, ಈ ಜಾಗದ ಹದ್ದುಬಸ್ತು ನಿಗದಿ ಮಾಡಿ ಒತ್ತುವರಿ ತೆರವು ಮಾಡಬೇಕು. ಮುಂದಿನ ಒಂದು ವಾರದೊಳಗೆ ಈ ಕಾರ್ಯ ಪೂರ್ಣಗೊಳಿಸಬೇಕೆಂದು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಮಮತಾ ಹಾಗೂ ರಾಜಸ್ವ ನಿರೀಕ್ಷಕ ಪ್ರಭು ಅವರಿಗೆ ನಿರ್ದೇಶಿಸಿದರು.

ಗ್ರಾಮಸ್ಥರು ಬೇಡಿಕೆಯನ್ನು ಮನ್ನಿಸಿ ಈಗಾಗಲೇ ಮುಡಾ ವತಿಯಿಂದ 5 ಕೋಟಿ ರೂ ವೆಚ್ಚದ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕೆರೆ ಅಭಿವೃದ್ದಿಗೆ ಆದ್ಯತೆ ನೀಡಲಾಗುತ್ತದೆ. ಈ ಜಾಗದಲ್ಲಿ ನಿರ್ಮಿಸಲುದ್ದೇಶಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಕನ್ನಡ ಭವನದ ಜತೆಗೆ ಗ್ರಾಮಸ್ಥರ ಬೇಡಿಕೆಯಂತೆ ರೈತರ ಅನುಕೂಲಕ್ಕೆ ಕಣ ಮತ್ತು ರಸ್ತೆ ನಿರ್ಮಾಣ, ಪಶು ಆಸ್ಪತ್ರೆ ನಿರ್ಮಾಣದ ಬಗ್ಗೆ ಗ್ರಾಮಸ್ಥರ ಜತೆ ಚರ್ಚಿಸಿ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದೆಂದರು.

ಗ್ರಾಮಸ್ಥರು ಸಹಕರಿಸಿದರೆ ಸಾರ್ವಜನಿಕ ಅನುಕೂಲಕ್ಕೆ ಅಗತ್ಯವಾಗುವ ಯೋಜನೆಯನ್ನು ಜಾರಿಗೊಳಿಸಲು ಮುಂದಾಗುತ್ತೇವೆ. ಇದಕ್ಕೆ ಎಲ್ಲರ ಸಹಕಾರ ಹಾಗೂ ಸಂಯಮ ಅಗತ್ಯವಾಗಿದ್ದು, ಅರಳಿಕಟ್ಟೆ ನಿರ್ಮಾಣ ಮತ್ತು ಬೋರ್‌ವೆಲ್ ಅಳವಡಿಕೆಗೆ ಕ್ರಮ ವಹಿಸುವ ಭರವಸೆ ವ್ಯಕ್ತಪಡಿಸಿದರು.

ಆರ್‌ಎಪಿಸಿಎಂಎಸ್ ನಿರ್ದೇಶಕ ಕೆ.ಸಿ.ರವೀಂದ್ರ, ನಗರಸಭಾ ಸದಸ್ಯ ಟಿ.ರವಿ, ಗ್ರಾಮದ ಮುಖಂಡರಾದ ಕೆ.ಗುರುಸ್ವಾಮಿ, ಕೆ.ರಾಜು, ಕೆ.ಎಸ್.ಆನಂದ್, ಕೆ.ಜೆ.ಆನೂಪ್, ಕೆ.ಬಿ.ರಾಮು, ಕೆ.ಸಿ.ಮಂಜುನಾಥ, ಕಾರ್ತಿಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net