

ಯಾದಗಿರಿ: ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯಕಾರಣಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಿದ್ದಪ್ಪ ಹೊಟ್ಟಿ ಅವರು ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿರುವುದಾಗಿ ಘೋಷಿಸಿದ್ದಾರೆ.
ಬುಧವಾರ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.25ರಂದು ಚುನಾವಣೆ ನಡೆಯಲಿದ್ದು, 40 ಕಾರ್ಯಕಾರಿ ಸದಸ್ಯ ಸ್ಥಾನಗಳಲ್ಲಿ ಈಗಾಗಲೇ 13 ಜನ ಮಹಿಳಾ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 27 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದೆ. ನಾನು ಯಾದಗಿರಿ ಜಿಲ್ಲೆಯಿಂದ ಕಾರ್ಯಕಾರಿಗೆ ನಾಮಪತ್ರ ಸಲ್ಲಿಸಿದ್ದೆ. ಆದರೆ, ಸಮಾಜದ ಹಿರಿಯರಾದ ಸಚಿವ ಈಶ್ವರ ಖಂಡ್ರೆ ಅವರು ತಮ್ಮನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಸಮಾಜದ ಹಿತದೃಷ್ಟಿಯಿಂದ ನಾಮಪತ್ರ ವಾಪಸ್ ಪಡೆಯಿರಿ, ನಿಮಗೆ ಮುಂದೆ ಸಮಾಜದಲ್ಲಿ ಸೂಕ್ತ ಸ್ಥಾನ,ಮಾನ ನೀಡುವುದಾಗಿ ಭರವಸೆ ನೀಡಿದ್ದರಿಂದ ಸ್ವ ಇಚ್ಛೆಯಿಂದ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುತ್ತಿದ್ದೆನೆ (ನಾಮಪತ್ರ ಹಿಂದಕ್ಕೆ ಪಡೆಯುವ ಅವಧಿ ಮುಗಿದ ಪ್ರಯುಕ್ತ) ಎಂದು ಅವರು ಹೇಳಿದ್ದಾರೆ.
ಕಣದಿಂದ ಹಿಂದಕ್ಕೆ ಸರಿಯುವ ಮೂಲಕ ಯಾದಗಿರಿ ಜಿಲ್ಲೆಗೆ ಸಿಗಬಹುದಿದ್ದ ಪ್ರಾತಿನಿಧ್ಯ ತಪ್ಪಿಸಿದಂತಾಗಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೊಟ್ಟಿ, ಈಗಾಗಲೇ ನಮ್ಮ ಜಿಲ್ಲೆಯವರಾದ ಸಚಿವ ಶರಣಬಸಪ್ಪ ದರ್ಶನಾಪುರ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಕಾರಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಮತ್ತು ಯಾದಗಿರಿ ಜಿಲ್ಲೆಯಿಂದ ಓರ್ವ ಮಹಿಳೆ ರಾಜ್ಯ ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಗೆ ಮಹಾಸಭಾದಿಂದ ನ್ಯಾಯ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಪದಾಧಿಕಾರಿಗಳಾದ ಮಹಾದೇವಪ್ಪಗೌಡ ಅಬ್ಬೆತುಮಕೂರು, ಅಯ್ಯಣ್ಣ ಮಾಸ್ಟರ್ ಹುಂಡೇಕಾರ, ಪ್ರಕಾಶ ಅಂಗಡಿ,ವೀರಭದ್ರಯ್ಯ ಜಾಕಾಮಠ, ಅಡಿವಪ್ಪ ಜಾಕಾ ಇತರರು ಇದ್ದರು.