ವೇಣುಗೋಪಾಲ್ ಹತ್ಯೆಗೆ ಧರ್ಮ, ರಾಜಕೀಯ ಕಾರಣವಲ್ಲ : ಡಾ.ಎಚ್.ಸಿ. ಮಹದೇವಪ್ಪ

H-C-Mahadevappa
Published on

ಮೈಸೂರು: ತಿ.ನರಸೀಪುರದಲ್ಲಿ ಹನುಮ ಜಯಂತಿ ವಿಚಾರವಾಗಿ ಹತ್ಯೆಗೀಡಾದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಅವರ ನಿವಾಸಕ್ಕೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭ ವೇಣುಗೋಪಾಲ್ ಅವರ ಪತ್ನಿ ಪೂರ್ಣಿಮಾ ಅವರಿಗೆ 4.12 ಲಕ್ಷ ರೂ. ಮೊತ್ತದ ಪರಿಹಾರ ಚೆಕ್‌ಅನ್ನು ಸಚಿವರು ನೀಡಿದರು. ಅಲ್ಲದೆ, ಪೂರ್ಣಿಮಾ ಅವರಿಗೆ ಮಾನವೀಯ ನೆಲೆಗಟ್ಟಿನಲ್ಲಿ ಡಿ ಗ್ರೂಪ್ ನೌಕರಿ ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೇಣುಗೋಪಾಲ್ ಧರ್ಮ ಹಾಗೂ ರಾಜಕೀಯ ಕಾರಣಕೋಸ್ಕರ ಹತ್ಯೆ ನಡೆದಿಲ್ಲ. ವೇಣುಗೋಪಾಲ್ ಯುವ ಬ್ರಿಗೇಡ್ ಮೂಲಕ ಹನುಮಂತ ಜಯಂತಿಯನ್ನು ಉತ್ತಮವಾಗಿ ಆಯೋಜಿಸಿದ್ದರು. ಹನುಮ ಜಯಂತಿಗೆ ಯಾರದೆ ತಕಾರರು ಇರಲಿಲ್ಲ. ಜಯಂತಿ ವೇಳೆ ಯುವ ಬ್ರಿಗೇಡ್‌ನಲ್ಲಿದ್ದವರೇ ಪೋಟೋ ವಿಚಾರಕ್ಕೆ ಜಗಳ ತೆಗೆದು ಹತ್ಯೆ ನಡೆಸಿದ್ದಾರೆ ಎಂದರು.

ಕೊಲೆಗೆ ಹಿಂದುತ್ವದ ಅಜೆಂಡಾ ಫಿಕ್ಸ್ ಮಾಡುವ ಸಂಚನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಈ ಆಟ ಬಹಳ ಕಾಲ ನಡೆಯೋದಿಲ್ಲ. ಎಲ್ಲದಕ್ಕೂ ಹಿಂದುತ್ವದ ಅಜೆಂಡಾ ಫಿಕ್ಸ್ ಮಾಡುವುದು ಬಿಜೆಪಿಯ ಬಿಜೆಪಿ ಚಾಳಿಯಾಗಿದೆ. ಹತ್ಯೆ ಪ್ರಕರಣದಲ್ಲಿ ನನ್ನ ಮಗನ ಹೆಸರನ್ನು ಬಿಜೆಪಿ ವಿನಾಕಾರಣ ಎಳೆದು ತರುತ್ತಿದೆ. ನನ್ನ ಮಗನ ಮೇಲೆ ಹೀಗೆ ಹಿಂದೆಯೂ ವಿನಾಕಾರಣ ಆರೋಪ ಮಾಡಿದ್ದರು. ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಪೊಲೀಸರು ಸರಿಯಾದ ಮಾರ್ಗದಲ್ಲಿ ತನಿಖೆ ನಡೆಸುತ್ತಿದ್ದು, ಹತ್ಯೆ ನಡೆದ 6 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.

ಈ ಕೊಲೆ ದೌರ್ಜನ್ಯ ಪ್ರಕರಣ ಅಲ್ಲ. ಆದರೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯದ ಯಾರಾದರು ಈ ರೀತಿ ಕೊಲೆಯಾದರೆ 8 ಲಕ್ಷ ಪರಿಹಾರ ನೀಡಬಹುದು. ಹಾಗಾಗಿ ಪರಿಹಾರದ ಮೊದಲ ಕಂತು 4.12 ಲಕ್ಷ ರೂ.ಗಳನ್ನು ನೀಡಲಾಗಿದೆ. ಪ್ರಕರಣದ ದೋಷಾರೋಪಣಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ನಂತರ ಪರಿಹಾರ ಮೊತ್ತದ ಉಳಿಕೆ ಹಣ ನೀಡಲಾಗುವುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net