ವೇಣುಗೋಪಾಲಸ್ವಾಮಿ ರಥೋತ್ಸವ ವೈಭವ

ವೇಣುಗೋಪಾಲಸ್ವಾಮಿ ರಥೋತ್ಸವ ವೈಭವ
Published on

ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ - ತಾಲೂಕು ಉಪ ಖಜಾನೆಯಿಂದ ರತ್ನ ಖಚಿತ ಆಭರಣಗಳ ರವಾನೆ

ದೇವನಹಳ್ಳಿ: ಪ್ರತೀ ವರ್ಷದಂತೆ ಈ ಬಾರಿಯೂ ಪಟ್ಟಣದ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಧಾರ್ಮಿಕ ಆಚರಣೆಗಳೊಂದಿಗೆ ಸಕಲ ವಿಧಿ-ವಿಧಾನಗಳ ಮೂಲಕ ಸಾವಿರಾರು ಭಕ್ತರು, ತಾಲೂಕಿನ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ರಥ ಎಳೆದು ಸಂಭ್ರಮಿಸಿದರು.

ತಾಲೂಕು ಖಜಾನೆಯಿಂದ ಸ್ವಾಮಿಯ ರತ್ನಖಚಿತ ವಜ್ರ ವೈಡೂರ್ಯ ಹಾಗೂ ಚಿನ್ನಾಭರಣಗಳನ್ನು ಪೊಲೀಸರ ಕಾವಲಿನೊಂದಿಗೆ ತಹಸೀಲ್ದಾರ್ ಎಚ್.ಬಾಲಕೃಷ್ಣ ನೇತೃತ್ವದಲ್ಲಿ ದೇವಾಲಯಕ್ಕೆ ತಂದು ಆಭರಣಗಳನ್ನು ದೇವರ ಮೂರ್ತಿಗೆ ತೊಡಿಸಿ ದೇವಾಲಯದ ಸುತ್ತಲು ಪ್ರದಕ್ಷಿಣೆ ಹಾಕಲಾಯಿತು. ರಥೋತ್ಸವದ ತೇರಿನಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಪ್ರತಿಷ್ಠಾಪಿಸಿ ನಂತರ ಸಚಿವ ಕೆಎಚ್.ಮುನಿಯಪ್ಪ ಪೂಜೆ ಸಲ್ಲಿಸಿ ರಥಕ್ಕೆ ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ತೇರಿಗೆ ಧವನ ಸಮೇತ ಬಾಳೆಹಣ್ಣನ್ನು ಎಸೆದರು. ನಂತರ ತೇರನ್ನು ದೇಶದ ಪೇಟೆ ಗಾಂಧಿಚೌಕದಲ್ಲಿ ತಂದು ನಿಲ್ಲಿಸಲಾಯಿತು. ಭಕ್ತರು ಪೂಜೆ-ಪುನಸ್ಕಾರ ನೆರವೇರಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಸಂಜೆ ವೇಳೆಯಷ್ಟರಲ್ಲಿ ತೇರನ್ನು ದೇವಾಲಯದ ಬಳಿ ತಂದು ನಿಲ್ಲಿಸಲಾಯಿತು.

ಗ್ರಾಮಸ್ಥರಿಂದ ರಥ ಬಿಚ್ಚುವ ಕೆಲಸ:

ಧಾರ್ಮಿಕ ದತ್ತಿ ಇಲಾಖೆ ಹಾಗೂ ವೇಣು ಗೋಪಾಲಸ್ವಾಮಿ ರಥೋತ್ಸವ ಸಮಿತಿಯಿಂದ ನಡೆದ ಕಾರ್ಯಕ್ರಮಗಳಲ್ಲಿ ರಥಸಪ್ತಮಿಯಿಂದ 9 ದಿನಗಳು ಆಚರಣೆಗೊಂಡ ಕಾರ್ಯಕ್ರಮಗಳಲ್ಲಿ ಪಟ್ಟಣದ ಅಯೋಧ್ಯಾನಗರ ಶಿವಾಚಾರ ನಗರ್ತ ಸಂಘದವರಿಂದ ಕಲ್ಯಾಣೋತ್ಸವ, ಬಿದಲೂರಿನ ಗ್ರಾಮಸ್ಥರಿಂದ ರಥವನ್ನು ಕಟ್ಟುವ ಕೆಲಸವಾದರೇ, ಗೋಕರೆ ಗ್ರಾಮಸ್ಥರು ರಥವನ್ನು ಬಿಚ್ಚುವ ಕೆಲಸ ಮಾಡಲಿದ್ದಾರೆ.

ಅನ್ನಸಂತರ್ಪಣೆ: ಬ್ರಹ್ಮರಥೋತ್ಸವದ ಪ್ರಯುಕ್ತ ಶ್ರೀಚೌಡೇಶ್ವರಿ ದೇವಾಲಯದ ಬಳಿಯಿರುವ ದೊಡ್ಡಿ ಅಪ್ಪಯ್ಯಣ್ಣನವರ ಛತ್ರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಯಿತು. ಸಚಿವ ಮುನಿಯಪ್ಪ ಅನ್ನದ ರಾಶಿಗೆ ಪೂಜೆ ಸಲ್ಲಿಸಿ ಅನ್ನದಾನಕ್ಕೆ ಚಾಲನೆ ನೀಡಿದರು.

ಇಂದು ಹಗಲು ಪರಿಷೆ: ರಥೋತ್ಸವ ನಿಮಿತ್ತ ಶುಕ್ರವಾರ ಹಗಲು ಪರಿಷೆಯಿದ್ದು, ಹೆಚ್ಚಿನ ಜನ ಆಗಮಿಸುವುದರಿಂದ ಹೆಚ್ಚಿನ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಹಗಲು ಪರಿಷೆಯಲ್ಲಿ ದಾಸಯ್ಯನವರಿಂದ ಮಂಡಿಗೆ ಅಲಗುಸೇವೆ ನಡೆಯಲಿದ್ದು, ರಂಗನಾಥಸ್ವಾಮಿ ದೇವಾಲಯದಲ್ಲಿ, ನೀರಿನ ಪಾನಕ ಹಾಗೂ ಮಜ್ಜಿಗೆ ಹೆಸರುಬೇಳೆ ವಿತರಣೆ ಅನ್ನದಾನ ಏರ್ಪಡಿಸಲಾಗಿದೆ. ರಥೋತ್ಸವದಲ್ಲಿ ಬಯಪ ಅಧ್ಯಕ್ಷ ವಿ.ಶಾಂತಕುಮಾರ್, ಮಾಜಿ ಶಾಸಕ ಜಿ.ಚಂದ್ರಣ್ಣ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಗಂಗಾಧರ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಪುರಸಭಾ ಅಧ್ಯಕ್ಷ ಡಿ.ಎಂ.ಮುನಿಕೃಷ್ಣ, ಉಪಾಧ್ಯಕ್ಷ ಜಿ.ಎ.ರವೀಂದ್ರ ಮಾಜಿ ಉಪಾಧ್ಯಕ್ಷೆ ಗೀತಾ ಶ್ರೀಧರ್, ಸದಸ್ಯರಾದ ಎನ್.ರಘು, ಪುಷ್ಪಲತಾ ಲಕ್ಷ್ಮೀನಾರಾಯಣ್, ವೇಣುಗೋಪಾಲ್, ಮಂಜುನಾಥ್, ಮುಖ್ಯಾಧಿಕಾರಿ ದೊಡ್ಡಮಲವಯ್ಯ, ಆರೋಗ್ಯ ನಿರೀಕ್ಷಕಿ ಶ್ರೀದೇವಿ, ದೇವಾಲಯ ಸಮಿತಿ ಎ.ಎನ್.ವಸಂತಬಾಬು, ಪ್ರಧಾನ ಅರ್ಚಕ ಕಣ್ಣನ್‌ಭಟ್ಟ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net