

ಹುಬ್ಬಳ್ಳಿ: ಉತ್ತರ ಕರ್ನಾಟಕದ ದ್ವೀತಿಯ ಹಾಗೂ ತೃತೀಯ ಸ್ತರದ ನಗರಗಳ ಸಂಶೋಧನಾರ್ಥಿಗಳ ಅನುಕೂಲಕ್ಕಾಗಿ ಮೂರು ತಿಂಗಳ ಉದ್ಯಮಶೀಲತೆ ಕಾರ್ಯಕ್ರಮ ವೆಂಚರ್ ವೈಬ್ 2.0 ಅನ್ನು ಇಲ್ಲಿಯ ಕೆಎಲ್ಇ ಸೆಂಟರ್ ಫಾರ್ ಟೆಕ್ನಾಲಾಜಿ ಇನ್ನೋವೇಶನ್ ಹಾಗೂ ಆಂತ್ರಪ್ರೆನ್ಯುರಶಿಪ್ ನಲ್ಲಿ (ಕೆಎಲ್ಇ- ಸಿಟಿಐಇ) ಆರಂಭಿಸಲಾಗಿದೆ.
ಯುವ ಮನಸ್ಸುಗಳಲ್ಲಿ ಸಂಶೋಧನೆ ಹಾಗೂ ಉದ್ಯಮಶೀಲ ಆಲೋಚನೆಗಳನ್ನು ಬೆಳೆಸುವುದು ಹಾಗೂ ಹೊಸ ಆವಿಷ್ಕಾರಗಳಿಗೆ ಅಗತ್ಯ ಸಹಕಾರ, ಮಾರ್ಗದರ್ಶನ ನೀಡುವುದು, ವಾಸ್ತವ ಜಗತ್ತಿನ ಉದ್ಯಮಗಳ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಇನ್ ಕ್ಯುಬೇಶನ್ ಸೌಲಭ್ಯ ನೀಡುವ ಉದ್ದೇಶ ಹೊಂದಲಾಗಿದೆ. ವೆಂಚರ್ ವೈಬ್ ಮೊದಲ ಆವೃತ್ತಿಯ ಯಶಸ್ಸಿನ ನಂತರ ಶೈಕ್ಷಣಿಕ ಹಾಗೂ ಕೈಗಾರಿಕೆಗಳ ಮಧ್ಯದ ಸಂಬಂಧ ಬಲಗೊಳಿಸುವುದು ಮತ್ತು ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದೊಂದಿಗೆ ವೆಂಚರ್ ವೈಬ್ 2.0 ಜಾರಿಗೆ ತರಲಾಗಿದೆ.
ಅತಿಥಿಯಾಗಿದ್ದ ಇಲೆಕ್ಟ್ರಾನಿಕ್ಸ್ ಹಾಗೂ ಇನ್ಫಾಮೇರ್ಶನ್ ಟೆಕ್ನಾಲಜಿ ಮಂತ್ರಾಲಯದ ಐಪಿಆರ್ ಹಾಗೂ ಸ್ಟಾರ್ಟಪ್, ಇನ್ನೋವೇಶನ್ ಜಂಟಿ ನಿರ್ದೇಶಕ ಅನುರಾಗ ಕುಮಾರ ಮಾತನಾಡಿ, ಶೈಕ್ಷಣಿಕ ಹಾಗೂ ಕೈಗಾರಿಕೆಗಳ ಪಾಲುದಾರಿಕೆಯನ್ನು ಅರ್ಥಪೂರ್ಣಗೊಳಿಸಿ ಉದ್ಯಮಶೀಲತೆಗೆ ಉತ್ತೇಜನ ನೀಡಲು ವೆಂಚರ್ ವೈಬ್ 2.0 ಮಹತ್ವದ ಹೆಜ್ಜೆಯಾಗಿದೆ. ಭಾರತದಲ್ಲಿ ಆವಿಷ್ಕಾರಗಳನ್ನು ಹೆಚ್ಚಿಸಲು ಇಂತಹ ಪ್ರಯತ್ನಗಳು ಅಗತ್ಯ ಎಂದರು.
ಉದ್ಯಮದ ನಾಯಕರು, ಯಶಸ್ವಿ ಉದ್ಯಮಿಗಳು, ಶೈಕ್ಷಣಿಕ ತಜ್ಞರು, ಅನುಭವಿ ಮಹಾಗುರುಗಳು ಮುಂತಾದವರ ಮಾರ್ಗದರ್ಶನ ಇಲ್ಲಿ ಲಭ್ಯವಾಗಲಿದೆ ಎಂದರು.
ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ. ಪ್ರಕಾಶ ತೆವರಿ ಮಾತನಾಡಿ, ವಿದ್ಯಾರ್ಥಿಗಳ ನೇತೃತ್ವದ ಸ್ಟಾರ್ಟಪ್ಸ್ ಹಾಗೂ ಸಂಶೋಧನೆ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ಇಂತಹ ಕಾರ್ಯಕ್ರಮಗಳಿಗೆ ಬೆಂಬಲ ನೀಡಲಾಗುತ್ತಿದೆ. ವಿಶ್ವವಿದ್ಯಾಲಯವು ಉದ್ಯಮಶೀಲತೆ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿದೆ ಎಂದರು.
ಕೆಎಲ್ಇ ಸಿಟಿಐಇ ನಿರ್ದೇಶಕ ಶಿವಯೋಗಿ ತುರಮರಿ ಮಾತನಾಡಿದರು. ಕೈಗಾರಿಕೆ ಪಾಲುದಾರರಾದ ಸುಪ್ರಿಯಾ ಪ್ರೊಟೊಟೆಕ್, ಕರ್ನಾಟಕ ವಾಲ್ವ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಶನ್, ಹೊಸಮನಿ ನ್ಯೂಟ್ರಿಸೆಟಿಕಲ್ಸ್ ಲಿಮಿಟೆಡ್, ಸಮರ್ಥ ಬಯೋಟೆಕ್, ಕ್ರಿನ್ಸನ್ ಟೆಕ್ನಾಲಜಿಸ್, ನೇಚರ್ ಫರ್ಸ್ಟ್ ಇಕೋ ವಿಲೇಜ್ ಮುಂತಾದ ಸಂಸ್ಥೆಗಳ ಪ್ರತಿನಿಧಿಗಳು, ಡಾ. ಅರುಣ ತಿಗಡಿ, ಶಿವಾನಂದ ಆವಟಿ, ಮಂಜುನಾಥ ಹಿರೇಮಠ, ಸಂಶೋಧನಾರ್ಥಿಗಳು, ಪ್ರಾಧ್ಯಾಪಕರು, ಉದ್ಯಮಿಗಳು ಭಾಗವಹಿಸಿದ್ದರು.
ಹರೀಶ ಅಗಡಿ ಸ್ವಾಗತಿಸಿದರು. ಸುನೈನಾ ಧಾನವೆ ಕಾರ್ಯಕ್ರಮ ನಿರೂಪಿಸಿದರು. ಡಾ. ವಿನಾಯಕ ಹೊಸಮನಿ ವಂದಿಸಿದರು.