

ಅಂಕೋಲಾ: ಸರ್ಕಾರ ಹಾಗೂ ಉಸ್ತುವಾರಿ ಮಂತ್ರಿಗಳ ನಿರ್ದೇಶನದಂತೆ ಜನಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರದ ಸವಲತ್ತು ದೊರಕಿಸಲು ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದು, ಸ್ಥಳೀಯ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು ಎಂದು ತಹಸೀಲ್ದಾರ್ ಅಶೋಕ ಎನ್.ಭಟ್ ಹೇಳಿದರು.
ತಾಲೂಕಿನ ವಾಸರಕುದ್ರಿಗೆ ಗ್ರಾಪಂ ವ್ಯಾಪ್ತಿಯ ಶಾಲಾ ಆವರಣದಲ್ಲಿ ಕುಮಟಾ ಎಸಿ ಕಲ್ಯಾಣಿ ಕಾಂಬಳೆ ಅಧ್ಯಕ್ಷ ತೆಯಲ್ಲಿ ಬುಧವಾರ ಗ್ರಾಮ ವಾಸ್ತವ್ಯ ಮತ್ತು ಪಿಂಚಣಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಸರಕುದ್ರಿಗೆ ಗ್ರಾಪಂ ಅಧ್ಯಕ್ಷ ಪ್ರದೀಪ ಎನ್.ನಾಯಕ ಮಾತನಾಡಿ, ಗಂಗಾವಳಿ ನದಿ ಪ್ರವಾಹ ಮತ್ತಿತರ ಸಂದರ್ಭದಲ್ಲಿ ಗ್ರಾಮಸ್ಥರು ಪಡುವ ತೊಂದರೆ, ಪಟ್ಟಣ ಸಮೀಪದಲ್ಲಿದ್ದರೂ ಹಲವು ಮೂಲಸೌಕರ್ಯಗಳ ಕೊರತೆಯಿದೆ. ಗ್ರಾಮ ನಕ್ಷೆ ಸಿಗುತ್ತಿಲ್ಲ, ಪ್ರವಾಹ ಪೀಡಿತ ಗ್ರಾಮಕ್ಕೆ ಏತನೀರಾವರಿ ಸೌಲಭ್ಯ ಬೇಕಿದೆ. ಸ್ಮಶಾನಭೂಮಿ ಮಂಜೂರು ಮಾಡಿಸಬೇಕು ಎಂದು ಮನವಿ ಮಾಡಿದರು.
ಎಸಿ ಕಲ್ಯಾಣಿ ಕಾಂಬಳೆ ಮಾತನಾಡಿ, ಸಾರ್ವಜನಿಕರ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ. ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬರೂ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಸಿಡಿಪಿಒ ಸವಿತಾ ಶಾಸ್ತ್ರೀಮಠ, ಬಿಇಒ ಮಂಗಳಲಕ್ಷ್ಮೀ ಪಾಟೀಲ ಮಾತನಾಡಿದರು.
ಉಪತಹಸೀಲ್ದಾರ್ ಸುರೇಶ ಹರಿಕಂತ್ರ, ಮಾಸ್ತಿಕಟ್ಟಾ ಆರ್‌ಎಫ್‌ಒ ವಿ.ಪಿ. ನಾಯ್ಕ, ಟಿಎಚ್‌ಒ ಡಾ. ಜಗದೀಶ ನಾಯ್ಕ, ಗ್ರಾಪಂ. ಉಪಾಧ್ಯಕ್ಷೆ ನಾಗಮ್ಮ ಗೌಡ, ಸದಸ್ಯರಾದ ಸುಬ್ರಾಯ ಗೌಡ, ದಯಾನಂದ ನಾಯ್ಕ, ಬೇಬಿ ಆಗೇರ, ಅರ್ಚನಾ ನಾಯಕ ಉಪಸ್ಥಿತರಿದ್ದರು. ಪಿಡಿಒ ಸಹನಾ ನಾಯಕ ಸ್ವಾಗತಿಸಿದರು, ನಿವೃತ್ತ ಶಿಕ್ಷಕ ಗೌರೀಶ ನಾಯಕ ಶಿರಗುಂಜಿ ನಿರ್ವಹಿಸಿದರು.