

ಕಿರುವಾರ ಎಸ್. ಸುದರ್ಶನ್ ಕೋಲಾರ: ಬಡವರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಕೋಟ್ಯಂತರ ರೂ. ವೆಚ್ಚ ಮಾಡಿ ಖರೀದಿ ಮಾಡಿರುವ ವೆಂಟಿಲೇಟರ್ಗಳು, ನಗರದ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯಲ್ಲಿ ರೋಗಗ್ರಸ್ತವಾಗಿ ಮೂಲೆ ಸೇರಿವೆ. ನಾಲ್ಕೈದು ವರ್ಷಗಳ ಹಿಂದೆ ಹೆಮ್ಮಾರಿಯಾಗಿ ಕಾಡಿದ ಕರೊನಾದಿಂದ ಜನರನ್ನು ರಕ್ಷಣೆ ಮಾಡಲು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ 70 ವೆಂಟಿಲೇಟರ್ ಯಂತ್ರಗಳನ್ನು ಖಾಸಗಿ ಕಂಪನಿಯು ಸಿಎಸ್ಆರ್ನಡಿ ಸರಬರಾಜು ಮಾಡಿತ್ತು. ಆದರೆ, ವೈದ್ಯಾಧಿಕಾರಿಗಳು, ತಾಂತ್ರಿಕ ಅಧಿಕಾರಿಗಳು, ಆಡಳಿತಾಧಿಕಾರಿಗಳ ವೈಲ್ಯದಿಂದ ಯಂತ್ರಗಳು ಬಡವರಿಗೆ ಸೇವೆಗೆ ಇಲ್ಲವಾಗಿವೆ. ಅಸಮರ್ಪಕ ನಿರ್ವಹಣೆಯಿಂದ ರೋಗಿಗಳಿಗೆ ಸೇವೆ ಕಲ್ಪಿಸಲಾಗುತ್ತಿಲ್ಲ.
ನ್ಯುಮೋನಿಯಾ, ಊಸಿರಾಟ ತೊಂದರೆ ಹೀಗೆ ಹಲವು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆಗೆ ಬರುವ ರೋಗಿಗಳನ್ನು ವಿನಾಕಾರಣ ನಗರದ ಪ್ರತಿಷ್ಠಿತ ಅಥವಾ ಬೆಂಗಳೂರಿನ ಆಸ್ಪತ್ರೆಗಳಿಗೆ ವೈದ್ಯರು ಶಿಾರಸು ಮಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲೂ ವೈದ್ಯರಿದ್ದಾರೆ. ವೆಂಟಿಲೇಟರ್ಗಳ ಬಳಕೆಗಾಗಿ ಕೋವಿಡ್ ಸಮಯದಲ್ಲಿ ಆರ್.ಎಲ್.ಜಾಲಪ್ಪ ಆಸ್ಪತ್ರೆಯಿಂದ 2ದಿನಕ್ಕೊಬ್ಬರು ತಾಂತ್ರಿಕ ಸಿಬ್ಬಂದಿ ಬಂದು ನಿರ್ವಹಣೆ ಮಾಡುತ್ತಿದ್ದರು. ಆದರೆ, ಎಲ್ಲವೂ ಬದಲಾಗಿದ್ದು, ಯಂತ್ರಗಳು ತುಕ್ಕು ಹಿಡಿಯುತ್ತಿವೆ.
45ಕ್ಕೂ ಹೆಚ್ಚು ಯಂತ್ರ ಮಾಯ!: ಒಟ್ಟು 70 ವೆಂಟಿಲೇಟರ್ಗಳ ಪೈಕಿ 20ಕ್ಕೂ ಹೆಚ್ಚು ಯಂತ್ರಗಳು ಕೊಠಡಿಯೊಂದರಲ್ಲಿ ತುಕ್ಕು ಹಿಡಿಯುತ್ತಿದ್ದು, ಐಸಿಯು ವಾರ್ಡ್ನಲ್ಲಿ 5 ಯಂತ್ರಗಳಿವೆ, ಉಳಿದ ಯಂತ್ರಗಳು ಮಾಯವಾಗಿವೆ. ಉಳಿದವು ಎಲ್ಲಿಗೆ ಹೋದವು ಎಂಬ ಅನುಮಾನ ಮನೆ ಮಾಡಿದೆ. ಆಸ್ಪತ್ರೆಯ ಬಹುತೇಕ ಸರ್ಕಾರಿಗೆ ವೈದ್ಯರಿಗೆ ಖಾಸಗಿ ಸೇವೆಯ ಮೇಲೆ ವ್ಯಾಮೋಹ ಜಾಸ್ತಿ. ಅದರಲ್ಲೂ ಆಸ್ಪತ್ರೆಯಲ್ಲಿ ಈಗ ಯಂತ್ರಗಳು ಕಾಣದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಕೆಲ ವೈದ್ಯರು ಪ್ರಭಾವ ಬಳಕೆ ಮಾಡಿ ಖಾಸಗಿ ನರ್ಸಿಂಗ್ ಹೋಂ, ಆಸ್ಪತ್ರೆಗಳಿಗೆ ಸಾಗಿಸಿಕೊಂಡು ಹೋಗಿರುವ ಆರೋಪ ಕೇಳಿ ಬಂದಿದೆ.
ಸಂಬಂಧವಿಲ್ಲದಂತೆ ವರ್ತನೆ: ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಐಸಿಯು ವಾರ್ಡ್ ನಿರ್ಮಾಣ ಮಾಡಲಾಗಿದ್ದು, ಅದರಲ್ಲಿ ವೆಂಟಿಲೇಟರ್ ಬೆಡ್ಗಳನ್ನು ಅಳವಡಿಸಲಾಗಿದೆ. ತೀವ್ರ ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಆಕ್ಸಿಜನ್ ನಂತರ, ವೆಂಟಿಲೇಟರ್ ಬಳಕೆ ಮಾಡಬೇಕು. ಆದರೆ ಹೆಸರಿಗಷ್ಟೇ ಈ ವೆಂಟಿಲೇಟರ್ ಬೆಡ್ ಮೀಸಲಿರಿಸಲಾಗಿದೆ, ಆದರೆ ಯಂತ್ರಗಳು ಬಳಕೆ ಆಗುತ್ತಿರುವುದು ಒಂದೆರಡು ಮಾತ್ರ. ಇರುವ ಯಂತ್ರಗಳ ಪೈಕಿ ಶೇ.50 ಸಹ ಬಳಕೆ ಮಾಡದೆ ಇರುವುದು ವೈದ್ಯರ ಸೇವೆಗೆ ಅಡ್ಡಿಯಾಗಿದೆ. ಈ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ, ವೈದ್ಯಕಿಯ ಸಲಕರಣೆಗಳ ನಿರ್ವಹಣೆಯ ಮೇಲುಸ್ತುವಾರಿ ಇಂಜನಿಯರ್ಗಳನ್ನು ಕೇಳಿದರೆ ಏನೂ ಸಂಬಂಧವಿಲ್ಲದಂತೆ ವರ್ತಿಸುತ್ತಾರೆ ಎಂಬುದು ಕೆಲ ವೈದ್ಯರ ಬೇಸರದ ಮಾತು.
ದೂರು ದಾಖಲಿಸಲು ಒತ್ತಾಯ: ಸುಮಾರು ದಿನಗಳಿಂದ ವೆಂಟಿಲೇಟರ್ ಯಂತ್ರ ಬಳಕೆ ಮಾಡದಿದ್ದರೆ ಅವು ಉಪಯೋಗಕ್ಕೆ ಬರುವುದಿಲ್ಲ ಎಂದು ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಕೊಠಡಿಯಲ್ಲಿ ಯಂತ್ರಗಳನ್ನು ಇರಿಸಲಾಗಿದ್ದು, ಉಳಿದ ಯಂತ್ರಗಳು ಏನಾದವು ಎಂಬ ಅನುಮಾನ ಕಾಡುತ್ತಿದೆ. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳು ಪರಿಶೀಲನೆ ನಡೆಸಿ, ಯಂತ್ರಗಳು ಕಾಣೆಯಾಗಿರುವ ಬಗ್ಗೆ ತನಿಖೆ ನಡೆಸಿ ಇದಕ್ಕೆ ಕಾರಣರಾದವರ ವಿರುದ್ಧ ದೂರು ದಾಖಲಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಬಡವರ ಪಾಲಿಗೆ ಮುಳ್ಳಿನ ಹಾದಿಯಾಗಿದೆ. ಕಾಯಂ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ಮೊಬೈಲ್ನಲ್ಲಿ ಕಾಲಹರಣ ಮಾಡುತ್ತಾರೆ ಹೊರತು ಸೇವೆ ಮಾಡಲು ಮುಂದಾಗುವುದಿಲ್ಲ. ಇದಕ್ಕೆಲ್ಲ ಕಾಯಂ ಚಿಕಿತ್ಸಕ ಇಲ್ಲದೆ ಇರುವುದರಿಂದ ಹಾದಿ ತಪ್ಪಿದೆ. > ಕೆ.ನಾರಾಯಣಗೌಡ ರೈತ ಮುಖಂಡ, ಕೋಲಾರ ಅಗತ್ಯವಿದ್ದರೂ ವೆಂಟಿಲೇಟರ್ಗಳನ್ನು ಬಳಕೆ ಮಾಡಲು ಅವಕಾಶ ನೀಡುತ್ತಿಲ್ಲ. ತಾಂತ್ರಿಕ ಸಿಬ್ಬಂದಿಯಿಂದ ನಿರ್ವಹಣೆ ಮಾಡಿಸುವುದು ಬಿಟ್ಟು ಮೂಲೆಗುಂಪು ಮಾಡಿದ್ದಾರೆ. ಇದರಿಂದ ರೋಗಿಗಳು ಸೇವೆಯಿಂದ ವಂಚಿತರಾಗುತ್ತಿದ್ದಾರೆ. > ಹೆಸರು ಹೇಳಲು ಇಚ್ಚಿಸದ ವೈದ್ಯ