ಕಾರ್ಕಳ ವ್ಯಾಪ್ತಿಯಲ್ಲಿ 87 ಕಿಂಡಿ ಅಣೆಕಟ್ಟು: ಶಾಸಕ ಸುನೀಲ್‌ಕುಮಾರ್ ಹೇಳಿಕೆ

kindi new
Published on

ಕಾರ್ಕಳ: ಪಶ್ಚಿಮಘಟ್ಟದ ತಪ್ಪಲು ತೀರಾ ಪ್ರದೇಶವಾಗಿರುವ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ 87 ಕಡೆಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳಲಿದ್ದು, ಶಾಸಕ ಹಾಗೂ ಸರ್ಕಾರದ ಮುಖ್ಯ ಸಚೇತಕ ವಿ. ಸುನೀಲ್‌ಕುಮಾರ್ ಅವರು ಆಯ್ದ ಐದು ಕಡೆಗಳಲ್ಲಿ ಶಿಲಾನ್ಯಾಸ ನೆರವೇರಿಸಿದ್ದಾರೆ.

ಮುದ್ರಾಡಿ, ಶಿವಪುರ, ಕಣಜಾರು, ನಿಟ್ಟೆ, ಮಾಳದಲ್ಲಿ ಕಿಂಡಿಅಣೆಕಟ್ಟಿನ ಶಿಲಾನ್ಯಾಸ ನೆರವೇರಿಸುವ ಮೂಲಕ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 87 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರವು ಪಶ್ಚಿಮಘಟ್ಟ ತಪ್ಪಲು ಪ್ರದೇಶದ ಅಂಚಿನಲ್ಲಿದ್ದು, ವಿಪರೀತ ಮಳೆಯು ಇದೇ ಪ್ರದೇಶ ವ್ಯಾಪ್ತಿಯಲ್ಲಿ ಪ್ರತಿವರ್ಷ ಸುರಿಯುತ್ತಿರುವುದು ಸಾಮಾನ್ಯವಾಗಿದೆ. ಸೀತಾನದಿ, ಶಾಂಭವಿ, ಸ್ವರ್ಣ ನದಿ ಇದೇ ಪ್ರದೇಶವಾಗಿ ಹರಿದು ಸಮುದ್ರ ಲೀನವಾಗುತ್ತಿವೆ. ಪ್ರತಿವರ್ಷ ಜನವರಿ ತಿಂಗಳ ಅಂತ್ಯದಲ್ಲಿ ಈ ನದಿಗಳು ಬತ್ತುತ್ತಿರುವುದರಿಂದ ಕೃಷಿ ಕಾಯಕ ಸೇರಿದಂತೆ ಕುಡಿಯುವ ನೀರಿಗೂ ತತ್ವಾರ ಎದುರಾಗುತ್ತಿವೆ. ಕೃಷಿಕರು ಹಾಗೂ ಸ್ಥಳೀಯ ನಾಗರಿಕರು ಕಳೆದ ಹಲವು ವರ್ಷಗಳಿಂದ ಶಾಸಕ ವಿ.ಸುನೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರು.

ಈ ಕುರಿತು ಶಾಸಕ ವಿ.ಸುನೀಲ್ ಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಪಶ್ಚಿಮ ವಾಹಿನಿ ಯೋಜನೆಗೆ ಅನುದಾನ ಬಿಡುಗಡೆಗೊಳಿಸುವಂತೆ ಪತ್ರ ಬರೆದಿದ್ದರು. ಅದರ ಭಾಗವಾಗಿ ಕೇಂದ್ರ ಸರ್ಕಾರವು ರೂ. 75 ಕೋಟಿ ಅನುದಾನ ಬಿಡುಗಡೆಗೊಳಿಸಿದೆ.

ಜಿಪಂ ಸದಸ್ಯರು, ತಾಪಂ ಸದಸ್ಯರು, ವಿವಿಧ ಗ್ರಾಪಂಗಳ ನಿಕಟಪೂರ್ವ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿ, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net