

ಹುಬ್ಬಳ್ಳಿ: ಎರಡೆತ್ತಿನ ಮಠ ಸೇವಾ ಸಮಿತಿ ವತಿಯಿಂದ ಇಲ್ಲಿಯ ಎರಡೆತ್ತಿನ ಮಠದಲ್ಲಿ ಮಂಗಳವಾರ ಮಾಸಿಕ ಶಿವಾನುಭವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವೆಂಕಟೇಶ ಕಾಟವೆ ಅವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯ. ಕಳೆದ ಐದು ವರ್ಷದಲ್ಲಿ ಶಾಲೆ, ಉದ್ಯಾನ ಹಾಗೂ ವಿವಿಧ ಪ್ರದೇಶದಲ್ಲಿ ಸುಮಾರು ಇಪ್ಪತ್ತೈದು ಸಾವಿರಕ್ಕಿಂತ ಹೆಚ್ಚು ಸಸಿ ನೆಟ್ಟಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಪರೀಕ್ಷಾ ಕಿಟ್ ಹಾಗೂ ಅಗತ್ಯ ಸಾಮಗ್ರಿ ಕಲ್ಪಿಸಿಕೊಟ್ಟಿದ್ದಾರೆ. ಪ್ರತಿ ವರ್ಷ ಬೇಸಿಗೆಯಲ್ಲಿ ವಿವಿಧ ಸ್ಥಳದಲ್ಲಿ ಬಾಯಾರಿ ಬಂದ ಜನರಿಗೆ ಅರವಟಿಗೆ ಸ್ಥಾಪಿಸಿದ್ದಾರೆ. ಪಶು-ಪಕ್ಷಿಗಳಿಗೂ ನೀರು ಸಂಗ್ರಹಿಸಿಟ್ಟಿದ್ದಾರೆ. ಆರೋಗ್ಯ ತಪಾಸಣೆ ಶಿಬಿರ, ಆಹಾರ ಧಾನ್ಯ, ಧಾರ್ಮಿಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಬಡವರ ಪಾಲಿಗೆ ವೆಂಕಟೇಶ ಕಾಟವೆ ಅವರು ಸಂಜೀವಿನಿ ಇದ್ದಂತೆ ಎಂದು ಬಣ್ಣಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಅಶೋಕ ಕಾಟವೆ ಅವರನ್ನು ಶ್ರೀಗಳು ಗೌರವಿಸಿದರು.
ಬೆಳಗ್ಗೆ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾ ಮಂಗಳಾರತಿ ಜರುಗಿತು.
ಪ್ರಮುಖರಾದ ರಾಜಣ್ಣ ಕಂಬ್ಳಿ, ಪ್ರಭು ಹಿರೇಮಠ, ಪ್ರಶಾಂತ ಹಾವಂಗಿ, ಮಹಾಂತೇಶ ನೂಲ್ವಿ, ಶಿವಪುತ್ರ ಹಿರೇಮಠ, ಶಶಿ ಬೇವೂರ, ಬಟ್ಲಿ ಮಹಾಂತೇಶ, ಸಚಿನ ಪೂಜಾರಿ, ಆನಂದ ಬಾಕಳೆ ಇತರರು ಉಪಸ್ಥಿತರಿದ್ದರು.