ವೆಂಕಟರಮಣಸ್ವಾಮಿ ಜಾತ್ರೆ ಇಂದು

14-GPT-4
ಗುಂಡ್ಲುಪೇಟೆ ತಾಲೂಕಿನ ಹುಲುಗನಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಸಿದ್ಧಪಡಿಸಲಾದ ರಥ.
Published on

ಗುಂಡ್ಲುಪೇಟೆ: ಮಕರ ಸಂಕ್ರಾಂತಿ (ಜ.15)ಯಂದು ದೊಡ್ಡ ಜಾತ್ರೆ ನಡೆಯುವ ಹುಲುಗನಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಅಂತಿಮ ಹಂತದ ಸಿದ್ಧತೆಗಳು ನಡೆದಿವೆ.


ಜಾತ್ರೆಯ ಅಂಗವಾಗಿ ಕಳೆದ ಹತ್ತು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ. ಬಿದಿರಿನಿಂದ ನಿರ್ಮಿಸಿದ ರಥವನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕರಿಸಿ ಸಿದ್ಧಪಡಿಸಲಾಗಿದೆ. ಮೂಲ ವಿಗ್ರಹಗಳು ಹಾಗೂ ಉತ್ಸವ ಮೂರ್ತಿಗಳಿಗೆ ನಾನಾ ವರ್ಣದ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ಶನಿವಾರ ರಾತ್ರಿ ಅಕ್ಕಪಕ್ಕದ ಗ್ರಾಮಗಳ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಲ್ಯಾಣೋತ್ಸವ ನಡೆಯಿತು. ಸೋಮವಾರ ಮಧ್ಯಾಹ್ನ 12.40ಕ್ಕೆ ಸರಿಯಾಗಿ ಮುಜರಾಯಿ ಇಲಾಖೆ ಅಧಿಕಾರಿಗಳು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.


ಪೊಲೀಸ್ ಬಿಗಿ ಬಂದೋಬಸ್ತ್, ಏಕಮುಖ ವಾಹನ ಸಂಚಾರ: ಸಂಕ್ರಾಂತಿಯಂದು ನಡೆಯುವ ಜಾತ್ರೆಗೆ ಸ್ಥಳೀಯರಲ್ಲದೆ ನೆರೆ ರಾಜ್ಯಗಳಿಂದಲೂ ಹೆಚ್ಚಿನ ಭಕ್ತರು ಆಗಮಿಸುವುದರಿಂದ ಪ್ರತಿ ವರ್ಷವೂ ನೂಕು ನುಗ್ಗಲು ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ಡಿವೈಎಸ್‌ಪಿ, ಮೂವರು ಸರ್ಕಲ್ ಇನ್ಸ್‌ಪೆಕ್ಟರ್, ಎಂಟು ಸಬ್‌ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ 140 ಸಿಬ್ಬಂದಿ ನಿಯೋಜಿಸಲಾಗಿದೆ. ತೆರಕಣಾಂಬಿಯಿಂದ ಬೊಮ್ಮನಹಳ್ಳಿ ರಸ್ತೆಯಲ್ಲಿ ಬೆಟ್ಟಕ್ಕೆ ಹೋಗುವ ವಾಹನಗಳು ಕೊತ್ತಲವಾಡಿ ಮಾರ್ಗದಲ್ಲಿ ವಾಪಸಾಗಬೇಕಾಗಿದೆ.

ಬೆಟ್ಟಕ್ಕೆ ಹೋಗುವ ಭಕ್ತರು ವಾಹನಗಳನ್ನು ತಪ್ಪಲಿನಲ್ಲಿ ನಿಲ್ಲಿಸಲು ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಹಲವೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ತೆರಕಣಾಂಬಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net