

ತುಮಕೂರು: 2005ರ ೆಬ್ರವರಿ 11ರಂದು ಪಾವಗಡ ತಾಲೂಕಿನ ವೆಂಕಟಾಪುರದಲ್ಲಿ ನಕ್ಸಲರ ಹತ್ಯಾಕಾಂಡದಲ್ಲಿ 7 ಪೊಲೀಸರು ಮತ್ತು ಒಬ್ಬ ನಾಗರಿಕ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರದ ಕ್ರಾಂತಿಕಾರಿ ಕವಿ ಹಾಗೂ ಹಾಡುಗಾರ ಗದ್ದರ್ ಸೋಮವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಸೋಮವಾರ ಸಂಜೆ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರಾದ ಗದ್ದರ್ ಅವರ ಜಾಮೀನು ಸಂಬಂಧಿಸಿದಂತೆ ಇಬ್ಬರು ಜಾಮೀನುದಾರರು ಪಹಣಿ ನೀಡಿ ಮುಚ್ಚಳಿಕೆ ಸಲ್ಲಿಸಿದರು. ಕೆ.ಎ.ರಾಮಕೃಷ್ಣಯ್ಯ ಮತ್ತು ವಲಸಪ್ಪ ಜಾಮೀನು ನೀಡಿದರು.
ವೆಂಕಟಾಪುರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, 2019ರ ನ.7 ರಂದು ಪಾವಗಡ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಪ್ರತಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆಯನ್ನು ಮಧುಗಿರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು. ನ್ಯಾಯಾಧೀಶರು ರಜೆ ಇದ್ದ ಕಾರಣ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ಗದ್ದರ್ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿದರು. ಗದ್ದರ್ ಪರ ವಕೀಲರಾದ ಪಾವಗಡ ಶ್ರೀರಾಮ್, ರಂಗನಾಥ್ ಯಾದವ್ ಮತ್ತು ಹನುಮಂತರಾಜು ವಕಾಲತ್ತು ವಹಿಸಿದ್ದರು. ಜ.20ಕ್ಕೆ ವಿಚಾರಣೆ ಮುಂದೂಡಲಾಯಿತು.
ಪ್ರಕರಣ ಹಿನ್ನೆಲೆ: ಚಿಕ್ಕಮಗಳೂರಿನ ನಕ್ಸಲ್ ನಾಯಕ ಸಾಕೇತ್ ರಾಜನ್‌ನನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆ ವಾಡಲಾಗಿತ್ತು. ಇದಕ್ಕೆ ಪ್ರತಿರೋಧವಾಗಿ ಪಾವಗಡ ತಾಲೂಕಿನ ವೆಂಕಟಾಪುರ ಸರ್ಕಾರಿ ಶಾಲೆಯಲ್ಲಿ ಬೀಡು ಬಿಟ್ಟಿದ್ದ ಕೆಎಸ್‌ಆರ್‌ಪಿ ತುಕಡಿ ಮೇಲೆ 2015ರ ೆಬ್ರವರಿ 11ರ ರಾತ್ರಿ ನಕ್ಸಲರು ಗ್ರೇನೆಡ್ ಮತ್ತು ಬಾಂಬ್‌ಗಳಿಂದ ದಾಳಿ ನಡೆಸಿದ್ದರು.
ನರಸಮ್ಮ ಗದ್ದುಗೆಗೆ ಪುಷ್ಪಾರ್ಚನೆ: ಪದ್ಮಶ್ರೀ ಸೂಲಗಿತ್ತಿ ನರಸಮ್ಮಅವರ ಗದ್ದುಗೆಗೆ ಕವಿ ಹಾಗೂ ಹಾಡುಗಾರ ಗದ್ದರ್ ಸೋಮವಾರ ಸಂಜೆ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿದರು. ಗಂಗಸಂದ್ರದಲ್ಲಿನ ನರಸಮ್ಮ ಗದ್ದುಗೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಗದ್ದರ್, ಸೂಲಗಿತ್ತಿ ನರಸಮ್ಮ ಬದುಕಿರುವಾಗ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಈ ದಿನ ಅವರ ಗದ್ದುಗೆಗೆ ಭೇಟಿ ನೀಡುರುವುದು ನನ್ನ ಪುಣ್ಯ. ಅವರ ಬಗ್ಗೆ ಎರಡು ಹಾಡುಗಳನ್ನು ಬರೆದಿದ್ದೇನೆ ಎಂದರು. ಒಂದು ಮಗುವಿನ ಜನನದ ಪ್ರಕ್ರಿಯೆಯ ಸಂದರ್ಭದಲ್ಲಿ ಎಷ್ಟೋ ಆಸ್ಪತ್ರೆಗಳಲ್ಲಿ ಪರಿಣಿತ ವೈದ್ಯರಿದ್ದರೂ ಪ್ರಸೂತಿಯ ಅವಘಡಗಳನ್ನು ನಾವು ಗಮನಿಸುತ್ತಿದ್ದೇವೆ. ಆದರೆ, ಏನೂ ಓದದ ನರಸಮ್ಮ ತನ್ನ ಅನುಭವದ ವಿದ್ಯೆಯಿಂದ ಸಾವಿರಾರು ತಾಯಂದಿರು ಹಾಗೂ ಹಸು ಕಂದಮ್ಮಗಳನ್ನು ಕಾಪಾಡಿರುವ ಅವರ ಕೆಲಸಕ್ಕೆ ನೋಬೆಲ್ ಪ್ರಶಸ್ತಿ ನೀಡಬೇಕಾಗಿತ್ತು. ಯಾವುದೇ ಶಿಫಾರಸು ಇಲ್ಲದೆ ಪದ್ಮಶ್ರೀ ಪ್ರಶಸ್ತಿ ನೀಡಿರುವ ಕೇಂದ್ರ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು. ಸೂಲಗಿತ್ತಿ ನರಸಮ್ಮ ಸೇವಾಕೇಂದ್ರದ ನಿರ್ದೇಶಕರಾದ ಪಾವಗಡ ಶ್ರೀರಾಮ್, ಬಿ.ಜಿ. ಸಾಗರ್, ಉಪನ್ಯಾಸಕರಾದ ಲಕ್ಷ್ಮೀರಂಗಯ್ಯ, ಕನ್ನಡ ಕೋಗಿಲೆ ಉಮಾ, ಜಂಬೇ ಬಾಲು, ಚಲನಚಿತ್ರ ನಿರ್ದೇಶಕ ಗಿರಿರಾಜ್, ನಟರಾದ ಸಂಜಯ್ ಕುಮಾರ್, ಬಬ್ಬೂರು ಪರಮೇಶ್ ಇದ್ದರು.