ಸೋಲಿಸಿದವರ ಗೆಲುವಿಗೆ ಶ್ರಮಿಸಿದ ವೆಂಕಟಮುನಿಯಪ್ಪ

FotoJet
Published on

ವಿಜಯವಾಣಿ ಸುದ್ದಿಜಾಲ ಕೋಲಾರ

ರಾಜಕಾರಣದಲ್ಲಿ ಸೋಲಿಸಿದವರ ಗೆಲುವಿಗೆ ವೈರತ್ವ ಮರೆತು ಬದ್ಧತೆಯಿಂದ ಶ್ರಮಿಸುವ ಹೃದಯ ವೈಶಾಲ್ಯತೆ ಹೊಂದಿದ್ದ ವಿ.ವೆಂಕಟಮುನಿಯಪ್ಪ ಜಿಲ್ಲೆಯಲ್ಲಿ ಕಾಂಗ್ರೆಸ್​ ಬಲಿಷ್ಠಗೊಳಿಸಲು ನೀಡಿದ ಕೊಡುಗೆ ಅಪಾರ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಶ್ಲಾಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ವಿಧಾನಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ನೇತೃತ್ವದಲ್ಲಿ ಜಿಪಂ ಮಾಜಿ ಅಧ್ಯಕ್ಷ ಜನ್ನಟ್ಟ ವಿ.ವೆಂಕಟಮುನಿಯಪ್ಪ ಅಭಿಮಾನಿ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೋಲಿನ ಕಹಿ ಮಾಸುವ ಮುನ್ನವೇ ಜನರ ಜತೆಗೆ ಬೆರೆಯುತ್ತಿದ್ದ ಅವರ ನಡೆ ನಮಗೆಲ್ಲ ಆದರ್ಶ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಜಿಪಂ ಅಧ್ಯಕ್ಷರಾಗಿ, ಕೋಲಾರ ನಗರಾಭಿವೃದ್ಧಿ ಅಧ್ಯಕ್ಷರಾಗಿ, ಎಪಿಎಂಸಿ ಸಂಸ್ಥಾಪಕ ಅಧ್ಯಕ್ಷರಾಗಿ ಸಲ್ಲಿಸಿರುವ ಸೇವೆ ಮರೆಯಲು ಸಾಧ್ಯವಿಲ್ಲ ಎಂದರು.

ಚುನಾವಣೆಯಲ್ಲಿ ನನ್ನ ವಿರುದ್ಧ ಸೋತರೂ ನಂತರದ ರಾಜಕೀಯ ಧ್ರುವಿಕರಣದಲ್ಲಿ ಕಹಿಯ ನಡುವೆಯೂ ಗೆಲುವಿಗೆ ಅವರು ಹಾಕಿದ ಶ್ರಮ, ಬೆಂಗಳೂರಿನಲ್ಲೂ ಅವರು ನನಗೆ ನೀಡಿದ ಬೆಂಬಲ ಸ್ಮರಣೀಯ, ವೈರತ್ವಕ್ಕೆ ಅವಕಾಶ ನೀಡದೆ ಜನಪರವಾಗಿದ್ದ ಅವರ ಬದ್ಧತೆ ನಮಗೆಲ್ಲ ಸ್ಫೂರ್ತಿ ಎಂದರು.

ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್​ಕುಮಾರ್​ ಮಾತನಾಡಿ, ವೆಂಕಟಮುನಿಯಪ್ಪ ನನಗೆ ಅಣ್ಣನಾಗಿದ್ದರು, ಅವರ ಕುಟುಂಬ ನನ್ನನ್ನು ಸದಸ್ಯನೆಂದು ಭಾವಿಸಿತ್ತು, ಅವರ ಸ್ಮರಣೆ ತಡವಾಗಿಯಾದರೂ ಮಾಡುತ್ತಿರುವುದು ಉತ್ತಮ ಕೆಲಸ. ಅವರ ಆದರ್ಶ ನಮಗೆಲ್ಲ ದಾರಿದೀಪವಾಗಿದೆ ಎಂದು ಸ್ಮರಿಸಿದರು.

ಮುಖಂಡರಾದ ವಕ್ಕಲೇರಿ ರಾಮು, ಎನ್​.ಜಿ.ಬ್ಯಾಟಪ್ಪ, ಸೋಮಣ್ಣ, ರಾಮಲಿಂಗೇಗೌಡ, ಉತ್ತರ ವಿವಿ ಸಿಂಡಿಕೇಟ್​ ಸದಸ್ಯ ಗೋಪಾಲಗೌಡ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಶಿವಕುಮಾರ್​, ಸುಗಟೂರು ವಿಶ್ವನಾಥ್​, ಸುಗಟೂರು ಎಸ್​ಎಫ್​ಸಿಎಸ್​ ಅಧ್ಯಕ್ಷ ಭಾಸ್ಕರ್​, ಮೈಲಾಂಡಹಳ್ಳಿ ಮುರಳಿ, ಜನಪನಹಳ್ಳಿ ನವೀನ್​ ಇದ್ದರು.

ರೈತ ಪ್ರಶಸ್ತಿ ನೀಡಲಿ

ದಿ.ವೆಂಕಟಮುನಿಯಪ್ಪ ರಾಜಕೀಯ ಒಳ ಏಟುಗಳನ್ನು ಅರಿಯದ ಮುಗ್ದರು, ಅದರಿಂದಲೇ 1994ರಲ್ಲಿ ಶಾಸಕರಾಗುವ ಅವಕಾಶದಿಂದ ವಂಚಿತರಾದರು. ರೈತ ಕುಟುಂಬದಿಂದ ಬಂದು ಜನಪರ ಕೆಲಸ ಮಾಡಿ, ಎಪಿಎಂಸಿ ಸಂಸ್ಥಾಪಕ ಕಾರ್ಯದರ್ಶಿಯಾಗಿ, ರೈತರಪರ ಕೆಲಸ ಮಾಡಿದ ದಿ.ವೆಂಕಟಮುನಿಯಪ್ಪ ಅವರ ಹೆಸರಿನಲ್ಲಿ ಕೃಷಿ ವಿವಿಯಿಂದ ರೈತ ಪ್ರಶಸ್ತಿ ನೀಡುವ ಆಲೋಚನೆ ಸರ್ಕಾರ ಮಾಡಲಿ ಎಂದು ಮಾಜಿ ಸಭಾಪತಿ ವಿ.ಆರ್​.ಸುದರ್ಶನ್​ ಸಲಹೆ ನೀಡಿದರು.

ಸೋಲಿಗೆ ಕಂಗೆಡದ ಮನಸ್ಥಿತಿ

ಹೊಗಳಗೆರೆ ನಾರಾಯಣಗೌಡರ ಗರಡಿಯಲ್ಲಿ ಪಳಗಿದ ವೆಂಕಟಮುನಿಯಪ್ಪ ನನ್ನ ರಾಜಕೀಯ ಗುರುಗಳಾಗಿದ್ದು, ಸೋಲನ್ನೂ ಧೈರ್ಯವಾಗಿ ಸ್ವೀಕರಿಸುವ ಮನಸ್ಥಿತಿ ಶ್ಲಾನೀಯವಾಗಿದ್ದು, ಸೋಲುಂಡ ಮರುದಿನವೇ ಜನರ ಜತೆಗೆ ಬೆರೆಯುವ ಪ್ರಯತ್ನ ಮಾಡುತ್ತಿದ್ದರು ಎಂದು ಎಂಎಲ್​ಸಿ ಎಂ.ಎಲ್​.ಅನಿಲ್​ಕುಮಾರ್​ ಸ್ಮರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net