ಮಹಾಯೋಗಿ ವೇಮನ ಲೋಕಪೂಜ್ಯ: ಶಾಸಕ ಚೆನ್ನಿ ಹೇಳಿಕೆ

vemana jayanti
ಶಿವಮೊಗ್ಗದಲ್ಲಿ ವೇಮನ ಜಯಂತ್ಯುತ್ಸವವನ್ನು ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು. ಎಸ್.ಜ್ಞಾನೇಶ್ವರ್, ಎಚ್.ಜಿ.ಭೀಮರೆಡ್ಡಿ, ಡಾ.ಶ್ರೀನಿವಾಸ ರೆಡ್ಡಿ, ಕೆ.ಜಿ.ಶ್ರೀನಿವಾಸ್, ಎಚ್.ಉಮೇಶ್ ಇತರರಿದ್ದರು.
Published on

ಶಿವಮೊಗ್ಗ: ರಾಮಕೃಷ್ಣ, ಬುದ್ಧ, ಬಸವ ಮುಂತಾದ ಲೋಕಪೂಜ್ಯರಂತೆ ಮೇರುಪಂಕ್ತಿಯಲ್ಲಿ ನಿಲ್ಲುವ ಮತ್ತೋರ್ವ ದಿವ್ಯಚೇತನ, ದೈವಾಂಶಸಂಭೂತ, ಶ್ರೇಷ್ಠ ದಾರ್ಶನಿಕ, ತತ್ವದರ್ಶಕ, ಸಮಾಜ ಸುಧಾರಕ ಮಹಾಯೋಗಿ ವೇಮನ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಜಿಲ್ಲಾಡಳಿತದಿಂದ ಶುಕ್ರವಾರ ಏರ್ಪಡಿಸಿದ್ದ ವೇಮನ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, 15ನೇ ಶತಮಾನದ ಪ್ರಸಿದ್ಧ ತೆಲುಗು ಕವಿ, ಶ್ರೇಷ್ಠ ವಚನಕಾರ, ಸಮಾಜಮುಖಿ ಚಿಂತಕ ವೇಮನ ಮನುಕುಲದ ಏಳಿಗೆಗಾಗಿ ಶ್ರಮಿಸಿದ ಮಹನೀಯ. ಇವರ ಸಾಹಿತ್ಯ ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿವೆ ಎಂದು ತಿಳಿಸಿದರು.
ವೇಮನ ವಚನ ಸಾಹಿತ್ಯದಲ್ಲಿ ವಿಶೇಷ ಕೃಷಿ ಮಾಡಿದವರು. ವಾಸ್ತವ ಬದುಕಿಗೆ ಹತ್ತಿರವಾಗಿರುವಂತೆ, ಸರಳ, ಸುಲಭ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಕವಿತೆಗಳನ್ನು ರಚಿಸಿದ್ದಾರೆ. ಅವರ ಮೌಲ್ಯಯುತ ಸಾಹಿತ್ಯ ದೇಶದ ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಗೊಂಡು ಅಪಾರ ಜನರನ್ನು ತಲುಪಿದೆ ಎಂದರು.
ಪದ್ಯಗಳಲ್ಲಿನ ಬಳಕೆಯಾಗಿರುವ ಭಾಷೆ, ನುಡಿಗಟ್ಟುಗಳು ಓದುಗರನ್ನು ತನ್ನತ್ತ ಸೆಳೆಯುತ್ತವೆ. ಅವುಗಳಲ್ಲಿ ವಿಶೇಷವಾಗಿ ಯೋಗ, ಬುದ್ಧಿಮತ್ತೆ ಮತ್ತು ನೈತಿಕ ವಿಷಯಗಳು ಒಳಗೊಂಡಿವೆ. ಯೋಗದಲ್ಲಿ ಅವರು ಹೆಚ್ಚು ಜನಪ್ರಿಯತೆ ಪಡೆದಿದ್ದಾರೆ. ಹೀಗಾಗಿ ಅವರನ್ನು ಯೋಗಿ ವೇಮನ ಎಂದೇ ಕರೆಯಲಾಗುತ್ತದೆ ಎಂದು ಹೇಳಿದರು.
ಕವಿ ವೇಮನ ಒಂದೆಡೆ ನೆಲೆಸದೆ ಕಾವ್ಯ ರಚನೆ ಮತ್ತು ಯೋಗದಲ್ಲಿ ಸಾಧನೆ ಮಾಡುತ್ತಾ, ದಕ್ಷಿಣ ರಾಜ್ಯಗಳಲ್ಲಿ ಸಂಚರಿಸಿ ಸಾಮಾನ್ಯ ಜೀವನ ನಡೆಸಿದರು. ಅವರ ಕವಿತೆಗಳಲ್ಲಿ ದ್ವಂದ್ವ, ಗೂಢಾರ್ಥವನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ. ಕಾವ್ಯಾತ್ಮಕ ಶೈಲಿ ವೇಮನರ ಪದ್ಯಗಳ ಹಲವು ಸಾಲುಗಳು ಪ್ರಸ್ತುತ ಸಂದರ್ಭದಲ್ಲಿ ತೆಲುಗು ಆಡುಭಾಷೆಯ ನುಡಿಗಟ್ಟುಗಳಾಗಿ ಪ್ರಚಲಿತದಲ್ಲಿವೆ ಎಂದು ತಿಳಿಸಿದರು.
ಮಾನವತಾ ಧರ್ಮ, ಅತ್ಯಂತ ಉತ್ಕೃಷ್ಟ ನಿಲುವು, ವಿಶಾಲ ನೋಟ, ಉದಾರ ಚಿಂತನೆ ಹೊಂದಿದ್ದ ವೇಮನರು ವಿಶ್ವಮಾನವತೆಯ ಸಂದೇಶಗಳುಳ್ಳ ಕೃತಿ ರಚನೆ ಮಾಡಿದ್ದಾರೆ. ಸಹೋದರ ಭಾವ, ವಿಶ್ವಕುಟುಂಬ ಮತ್ತು ದೇಶಪ್ರೇಮ, ಮತ-ಭಾಷೆ-ಪಂಥಗಳ ಎಲ್ಲೆ ಮೀರಿದ ಅವರ ಚಿಂತನೆ, ಸ್ಪಷ್ಟ ನಿಲುವು ಅಸಾಮಾನ್ಯವಾದುದ್ದಾಗಿದೆ ಎಂದರು.
ರೆಡ್ಡಿ ಸಮಾಜದ ಅಧ್ಯಕ್ಷ ಎಚ್.ಜಿ.ಭೀಮರೆಡ್ಡಿ, ಕಾರ್ಯದರ್ಶಿ ಕೆ.ಜಿ.ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ಪಾಲಿಕೆ ಮಾಜಿ ಸದಸ್ಯ ಎಸ್.ಜ್ಞಾನೇಶ್ವರ್, ಡಾ. ಶ್ರೀನಿವಾಸ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net