

ಕೋಲಾರ: ವೇಮನ ಶ್ರೇಷ್ಠ ವಚನಕಾರರು, ಚಿಂತಕರು ಮತ್ತು ಮಾನವ ಕುಲದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಇವರನ್ನು ರೆಡ್ಡಿ ಸಮಾಜಕ್ಕೆ ಸೀಮಿತಗೊಳಿಸಬಾರದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.
ಪ್ರಬೋಧ ಸೇವಾ ಸಮಿತಿ ಮತ್ತು ರೆಡ್ಡಿ ಸಂಘ ಕೋಲಾರ ಹಾಗೂ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ರಂಗಮಂದಿರದಲ್ಲಿ ಏರ್ಪಡಿಸಿದ್ದ ಶ್ರೀ ವೇಮನ ಭಗವಾನ್ ಜಯಂತಿಯಲ್ಲಿ ಮಾತನಾಡಿದರು.
ರೆಡ್ಡಿ ಸಮುದಾಯದ ಆಶಯದಂತೆ ರಾಜ್ಯದ ಮೊದಲ ಮುಖ್ಯಮಂತ್ರಿ ಜಿಲ್ಲೆಯವರೆ ಆದ ಕೆ.ಸಿ.ರೆಡ್ಡಿ ಅವರ ಪ್ರತಿಮೆಯನ್ನು ಕೋಲಾರ ನಗರ ಅಥವಾ ಡಿ.ಸಿ.ಕಚೇರಿಯಲ್ಲಿ ಅನಾವರಣಗೊಳಿಸಲು ಮುಖಂಡರೊಂದಿಗೆ ಚರ್ಚೆ ನಡೆಸಿ, ಶೀಘ್ರ ಪುತ್ಥಳಿ ಅನಾವರಣಗೊಳಿಸುವುದಾಗಿ ಭರವಸೆ ನೀಡಿದರು.
ಸಂಸದ ಎಂ.ಮಲ್ಲೇಶ್ಬಾಬು ಮಾತನಾಡಿ, ವೇಮನ ಮಹಾಜ್ಞಾನಿಗಳು ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು. ಅವರು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲ ಸಮುದಾಯದವರು ಜಯಂತಿಯಲ್ಲಿ ಭಾಗವಹಿಸುವಂತಾಗಬೇಕು ಎಂದರು.
ಸಮಿತಿಯ ಅಧ್ಯಕ್ಷ ಚಂದ್ರು ಮಾತನಾಡಿ, ವೇಮನ ಪದ್ಯಗಳಲ್ಲಿನ ಆತ್ಮಜ್ಞಾನವನ್ನು ಪೂರ್ತಿ ಅವಗಾಹನೆ ಮಾಡಿಕೊಂಡು ಆತನ ಮಹತ್ವವನ್ನು ಗುರುತಿಸಿದರೆ ಆತನು ಯೋಗೀಶ್ವರನೆಂದು ತಿಳಿಯವುದು. ವೇಮನ ವಾರಸುದಾರರಾದ ನಾವು ಧನ ವ್ಯಯವೋ, ಶ್ರಮವ್ಯಯವೋ ಮಾಡಿ ಜ್ಞಾನ ಪ್ರಚಾರವನ್ನು ಮಾಡಿ ವೇಮನ ಹೆಸರನ್ನು ಬೆಳಗಿಸೋಣ ಎಂದರು.
ನಗರದ ಪ್ರವಾಸಿ ಮಂದಿರದ ಮುಂಭಾಗ ಜಿಲ್ಲೆಯ ಎಲ್ಲ ರೆಡ್ಡಿ ಕುಲಬಾಂಧವರು ಹಾಗೂ ತೆತಸಿದ್ಧಾಂತ ಪ್ರಬೋಧ ಸೇವಾ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ವೇಮನ ಪ್ರತಿಮೆಯನ್ನು ಪುಷ್ಪ ಪಲ್ಲಕ್ಕಿಯಲ್ಲಿರಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ, ವಿಧಾನಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಎಂ.ಎಲ್. ಅನಿಲ್ಕುಮಾರ್, ಬಂಗಾರಪೇಟೆ ಚಂದ್ರಾರೆಡ್ಡಿ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಪ್ರಬೋಧ ಸೇವಾ ಸಮಿತಿಯ ಬೆಂಗಳೂರು, ಕೋಲಾರ, ನೆಲಮಂಗಲ, ಕುಪ್ಪಂ, ವಿಕೋಟೆ, ಬಂಗಾರಪಾಳ್ಯ ಸದಸ್ಯರು ಮತ್ತು ಮಾಲೂರು ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ರೆಡ್ಡಿ ಕುಲಭಾಂದವರು ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಪ್ರಬೋಧ ಸೇವಾ ಸಮಿತಿ ಅಧ್ಯಕ್ಷ ಚಂದ್ರು, ಪದಾಧಿಕಾರಿಗಳಾದ ಮಧು, ಕುಮಾರ್, ಗಾಯತ್ರಿ, ನಂಜಮ್ಮ, ವೆಂಕಟರಾಮಪ್ಪ, ಕೌಶಿಕ್, ಗಂಗರಾಜ್, ಭರತ್, ಮುರಳಿ, ಬಾಲಾಜಿ ಇದ್ದರು.