

ವೇಮಗಲ್: ಅಮೃತ್ ಮಿತ್ರ 2.0 ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಯೋಜನೆಗೆ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಆಯ್ಕೆಯಾಗಿದೆ ಎಂದು ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಂ.ವೆಂಕಟೇಶ್ ತಿಳಿಸಿದರು.
ಪಟ್ಟಣದ ಕಲ್ವ ಮಂಜಲಿ ರಸ್ತೆಯ ಖಾಸಗಿ ಲೇಔಟ್ನಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಅಮೃತ್ ಮಿತ್ರ 2.0 ಯೋಜನೆಯ ಅಭಿಯಾನದಡಿ ಜೂ.5ರಿಂದ ಆ.31ರವರೆಗೆ ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬರುವ ಕೆರೆ, ಉದ್ಯಾನವನ, ಸರ್ಕಾರಿ ಶಾಲಾ ಕಾಲೇಜುಗಳ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಮಾನವರ ಬದುಕಿನ ಮಹತ್ವದ ಶಕ್ತಿ. ಪರಿಸರದ ಭಾಗಗಳಾದ ಗಾಳಿ, ನೀರು, ಬೆಂಕಿ, ಆಕಾಶ, ಭೂಮಿ ಈ ಐದು ಅಂಶಗಳ ಮೇಲೆ ಮಾನವನ ಜೀವನ ನಿಂತಿದೆ. ನಾವುಗಳು ಪರಿಸರದಿಂದ ಎಲ್ಲವನ್ನೂ ಪಡೆಯುತ್ತೇವೆ. ಪರಿಸರ ಮನುಷ್ಯರ ಆರೋಗ್ಯವನ್ನು ತಾಯಿಯಂತೆ ನೋಡಿಕೊಳ್ಳುತ್ತದೆ. ಇದರೊಂದಿಗೆ ನಮಗೆ ಮಾನಸಿಕ ಶಾಂತಿ ಮತ್ತು ಸಂತೋಷ ನೀಡುತ್ತದೆ ಎಂದರು.
ಜಿಲ್ಲಾ ಯೋಜನಾ ನಿರ್ದೇಶಕಿ ಅಂಬಿಕಾ ಮಾತನಾಡಿ, ಕಾಡಿನ ನಾಶದಿಂದ ಪ್ರಾಣಿಗಳೆಲ್ಲ ನಾಡಿಗೆ ಬರುವ ಪರಿಸ್ಥಿತಿ ಬಂದಿದೆ. ಅಭಿವೃದ್ಧಿ ಹೆಸರಲ್ಲಿ ಪರಿಸರ ಹಾಳಾಗುವ ಕೆಲಸವಾಗಬಾರದು. ಮರ&ಗಿಡಗಳನ್ನು ಕಡಿಯುವುದರಿಂದ ಪರಿಸರ ಹಾಳಾಗಿ ನಾವು ಉಸಿರಾಡುವ ಗಾಳಿ ಎಲ್ಲವೂ ವಿಷಮಯವಾಗಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ಮರ ಬದುಕಿದ್ದಾಗ ಹಣ್ಣು& ಹಂಪಲು, ಹೂ, ಪ್ರಾಣಿ ಪಕ್ಷಿಗಳಿಗೆ ನೆಲೆ ಸಿಗುತ್ತದೆ. ಮರದಿಂದ ಉದುರಿದ ಎಲೆಗಳಿಂದ ಗೊಬ್ಬರ, ದಣಿದು ಬಂದವರಿಗೆ ನೆರಳು ಲಭಿಸುತ್ತದೆ. ಅದೇ ಮರ ಸತ್ತಾಗ ನಾನಾ ರೀತಿಯ ಉಪಯೋಗಗಳನ್ನು ನೀಡುತ್ತದೆ. ದಿನೇ ದಿನೇ ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ 9 ಕ್ಕೆ ಬಿಸಿಲಿನಲ್ಲಿ ಓಡಾಡಲು ಒದ್ದಾಡುವಂತಿದೆ. ಹೀಗೆಯೇ ಮುಂದುವರಿದರೆ ಮುಂದಿನ ಪೀಳಿಗೆಗೆ ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.
ಪಪಂ ವ್ಯವಸ್ಥಾಪಕರಾದ ಹನುಮಂತಪ್ಪ, ಮೈಲಾರ ಸ್ವಾಮಿ, ಆರೋಗ್ಯ ನಿರೀಕ್ಷಕ ಗಜಾನಂದರೆಡ್ಡಿ, ಎಎಲ್ಎಫ್ ಅಧ್ಯಕ್ಷರಾದ ಯಶೋದಾ, ಪದ್ಮಾವತಿ ಇತರರು ಇದ್ದರು.