

ತುಮಕೂರು : ಬೈಕ್ ವೀಲಿಂಗ್ ಮಾಡುವವರಿಗೆ ಗುಂಡು ಹೊಡೆಯಬೇಕು ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಶುಕ್ರವಾರ ಕರೆ ನೀಡಿರುವ ತುಮಕೂರು ಬಂದ್ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀಲಿಂಗ್ ಮಾಡುವುದು ಅಪರಾಧ. ಇದು ಟೆರರಿಸಂಗೂ ಮಿಗಿಲಾದದ್ದು. ವೀಲಿಂಗ್ ಮಾಡುವ ಮೂಲಕ ಅಮಾಯಕರ ಪ್ರಾಣಕ್ಕೆ ಕಂಟಕವಾಗುತ್ತಿದ್ದು ಇಂತಹವರಿಗೆ ಗುಂಡಿಕ್ಕಬೇಕು. ಇಂತಹ ಶಕ್ತಿಗಳ ನಿಗ್ರಹಕ್ಕಾಗಿ ತುಮಕೂರು ಬಂದ್ ಅನಿವಾರ್ಯ. ಹಾಗಾಗಿ, ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಬಂದ್‌ಗೆ ವ್ಯಾಪಕ ಬೆಂಬಲ: ತುಮಕೂರು ಬಂದ್‌ಗೆ ಹಿಂದುಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಇದಲ್ಲದೆ, ಆಟೋ ಚಾಲಕರು, ಅಂಗಡಿ ವ್ಯಾಪಾರಿಗಳು, ಹೋಟೆಲ್ ಅಸೋಸಿಯೇಷನ್ ಕೂಡ ಬೆಂಬಲ ನೀಡಿದೆ. ನಾವು ಯಾವುದೇ ಬಸ್ ತಡೆಯಲ್ಲ, ಎಲ್ಲ ನಾಗರಿಕರು ಬಂದ್ ಯಶಸ್ವಿಗೊಳಿಸಬೇಕು ಎಂದು ವಿಶ್ವ ಹಿಂದು ಪರಿಷತ್‌ನ ತುಮಕೂರು ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್ ಕೋರಿದರು.
ಹಿಂದುಪರ ಸಂಘಟನೆಗಳ ಮುಖಂಡರಾದ ಚಂದ್ರಶೇಖರ್, ದಯಾನಂದ್, ಪ್ರತಾಪ್, ರೇಣುಕಾ ಇದ್ದರು.
ಶಾಂತಿ ಕದಡುವ ಬಾಹ್ಯಶಕ್ತಿಗಳ ಮೇಲೆ ನಿಗಾವಹಿಸಿ : ಜನಸಾಮಾನ್ಯರ ಸಮಸ್ಯೆಗೆ ಬಂದ್ ಮಾಡಲಿ. ಆದರೆ, ಕೋಮು ಬಣ್ಣಕ್ಕಾಗಿ ಬಂದ್ ಮಾಡುತ್ತಿರುವುದು ಸರಿಯಲ್ಲ, ನಗರದಲ್ಲಿ ಶಾಂತಿ ಸಾಮರಸ್ಯ ಕಾಪಾಡಲು ರಕ್ಷಣಾ ಇಲಾಖೆ ಕ್ರಮವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪ್ರಗತಿಪರ ಸಂಘಟನೆಗಳು ಮನವಿ ಮಾಡಿದವು. ಹಿಂದುಪರ ಸಂಘಟನೆಗಳು ಶುಕ್ರವಾರ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಎಸ್ಪಿ ರಾಹುಲ್ ಕುಮಾರ್ ಶಹಾಪೂರವಾಡ್ ಅವರನ್ನು ಪ್ರಗತಿಪರ ಸಂಘಟನೆಗಳ ಮುಖಂಡರು ಭೇಟಿ ಮಾಡಿದರು.
ಬಂದ್ ವೇಳೆ ಹೊರಗಿನಿಂದ ಬಂದು ಇಲ್ಲಿ ಶಾಂತಿ ಕದಡುವ ಬಾಹ್ಯ ಶಕ್ತಿಗಳ ಮೇಲೆ ಪೊಲೀಸರು ನಿಗಾವಹಿಸಬೇಕು. ಶಾಂತಿಯುತವಾಗಿರುವ ತುಮಕೂರಿನಲ್ಲಿ ಮತೀಯ ಕಲಹವನ್ನುಂಟು ಮಾಡುವ ಯಾವುದೇ ಶಕ್ತಿಗಳ ಮೇಲೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ಚಿಂತಕ ಪ್ರೊ.ದೊರೈರಾಜು ಆಗ್ರಹಿಸಿದರು.
ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್, ಕಾರ್ಪೋರೇಟರ್ ಬಿ.ಎಸ್.ಮಂಜುನಾಥ್, ಮುಖಂಡರಾದ ಸೈಯದ್ ಮುಜೀಬ್, ಸುಬ್ರಮಣ್ಯ, ಪಿ.ಎನ್. ರಾಮಯ್ಯ, ನಿಧಿಕುಮಾರ್,ರಾಜೇಶ್, ಎಸ್.ಎನ್.ಸ್ವಾಮಿ, ಅಶ್ವತ್ಥನಾರಾಯಣ್, ಟಿ.ಎಸ್.ಗೌಸ್‌ಪಾಷ, ದರ್ಶನ್, ಉಬೇದುಲ್ಲಾ, ಜಾಕೀರ್‌ಪಾಷ, ಅಲ್ಲಾಭಕ್ಷ್, ಅಕ್ರಂಪಾಷ ಮತ್ತಿತರರು ಉಪಸ್ಥಿತರಿದ್ದರು.
ಟ್ರಾಫಿಕ್ ವಿಚಾರದಲ್ಲಿನ ಗಲಭೆಗೆ ಕೋಮು ಬಣ್ಣ ಹಚ್ಚಬೇಡಿ: ಎರಡು ದಿನಗಳ ಹಿಂದೆ ಟ್ರಾಫಿಕ್ ವಿಚಾರದಲ್ಲಿನ ಗಲಭೆಗೆ ಕೋಮು ಬಣ್ಣ ಹಚ್ಚಿ ನಗರದಲ್ಲಿ ಶಾಂತಿ ಕದಡುವ ಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ಮಾಡಿ ಶಾಂತಿ ಭಂಗಕ್ಕೆ ಅವಕಾಶ ನೀಡದಂತೆ ಮನವಿ ಮಾಡಿದರು.
ಮಾಜಿ ಶಾಸಕರಾದ ಎಸ್.ಷಫಿ ಅಹ್ಮದ್ ಹಾಗೂ ಎಸ್.ರಫೀಕ್ ಅಹ್ಮದ್ ನೇತೃತ್ವದಲ್ಲಿ ಗುರುವಾರ ಎಸ್ಪಿ ರಾಹುಲ್ ಕುಮಾರ್ ಶಹಾಪೂರವಾಡ್ ಅವರನ್ನು ಭೇಟಿ ಮಾಡಿ, 20 ವರ್ಷಗಳಿಂದ ಮುಸ್ಲಿಂ ಹಾಗೂ ಹಿಂದುಗಳು ಅಣ್ಣ-ತಮ್ಮಂದಿರಂತೆ, ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದು ಹೊರಗಿನ ಶಕ್ತಿಗಳಿಗೆ ಈ ಘಟನೆ ಲಾಭ ಪಡೆದು ಶಾಂತಿ ಕದಡುವ ಸಮಾಜಘಾತಕ ಶಕ್ತಿಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವಕೀಲ ಟಿ.ಎಸ್.ನಿರಂಜನ್, ಪಾಲಿಕೆ ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ನಯಾಜ್, ಪಾಲಿಕೆ ವಿಪಕ್ಷ ನಾಯಕ ಜೆ.ಕುಮಾರ್, ಕಾರ್ಪೋರೇಟರ್ ಮಹೇಶ್, ಮುಖಂಡರಾದ ಚಿಕ್ಕರಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ರಾಜು, ಮೆಹಬೂಬ್ ಪಾಷ, ಬಿ.ಕೆ.ಮಂಜುನಾಥ್, ಶೆಟ್ಟಳಯ್ಯ, ಪ್ರಣೀತ್, ಜಾಕೀರ್ ಪಾಷ, ರಾಜೇಂದ್ರ, ಅಯಾಜ್, ಉಬೇದ್ ಉಪಸ್ಥಿತರಿದ್ದರು.