ರೈತರಿಂದ ಹಣ ದೋಚಿದ ಮುಸುಕುಧಾರಿಗಳು

JANUA., 1, HNP., Ph.2.
Published on

ಹೊಳೆನರಸೀಪುರ: ಅಣ್ಣೆಚಾಕನಹಳ್ಳಿ ಗ್ರಾಮ ಸಮೀಪದ ರೈಲ್ವೆ ಅಂಡರ್ ಪಾಸ್ ಬಳಿ ಐವರು ಮುಸುಕುಧಾರಿಗಳು ಇಬ್ಬರು ರೈತರಿಂದ 12,500 ರೂ. ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.

ತಾಲೂಕಿನ ಶ್ರವಣೂರು ಗ್ರಾಮದ ಶಂಕರನಾಯಕ(43), ರಂಗಸ್ವಾಮಿ(46) ಸುಲಿಗೆಗೆ ಒಳಗಾದವರು. ತರಕಾರಿ ಮಾರಾಟ ಮಾಡಲು ತಮ್ಮ ದ್ವಿಚಕ್ರ ವಾಹನದಲ್ಲಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಬುಧವಾರ ಬೆಳಗಿನ ಜಾವ 3 ಗಂಟೆಯಲ್ಲಿ ರೈಲ್ವೆ ಅಂಡರ್ ಪಾಸ್ ಸಮೀಪ ಆಗಮಿಸಿದಾಗ ಮುಸುಕುಧಾರಿಗಳು ಕೂಗಿದ್ದಾರೆ. ರೈತರು ವಾಹನವನ್ನು ನಿಲ್ಲಿಸದೆ ಹೋದಾಗ ಮೂರು ವಾಹನದಲ್ಲಿ ಬಂದ ಐವರು ಮುಸುಕುಧಾರಿಗಳಲ್ಲಿ ಕೆಲವರು ರಂಗಸ್ವಾಮಿ ದ್ವಿಚಕ್ರ ವಾಹನ ಅಡ್ಡಗಟ್ಟಿ, ಹಲ್ಲೆ ನಡೆಸಿ, ನಾಲ್ಕೂವರೆ ಸಾವಿರ ರೂ. ದೋಚಿದ್ದಾರೆ.

ಶಂಕರನಾಯಕ ಅವರ ದ್ವಿಚಕ್ರ ವಾಹನವನ್ನು ಆಲಗೋಡನಹಳ್ಳಿ ಸಮೀಪ ಬೀಳಿಸಿ, ಹಲ್ಲೆ ನಡೆಸಿದ್ದಾರೆ. ಅವರ ಬಳಿ ಇದ್ದ ಎಂಟು ಸಾವಿರ ರೂ. ದೋಚಿದ್ದಾರೆ, ಗ್ರಾಮಸ್ಥರು ಬರುತ್ತಿರುವ ಶಬ್ದದಿಂದ ಎಚ್ಚೆತ್ತ ಮುಸುಕುಧಾರಿಗಳು ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

ಶಂಕರನಾಯಕ ಅವರ ಸೊಂಟದ ಭಾಗಕ್ಕೆ ಪೆಟ್ಟಾಗಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿರುವ ರಂಗಸ್ವಾಮಿ ಚಿಕಿತ್ಸೆ ಪಡೆದಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ದರೋಡೆಕೋರರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net