

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯದಲ್ಲಿ ಎಂಇಎಸ್ ನಿಷೇಧ, ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ ತಡೆಗಟ್ಟಬೇಕು ಎಂದು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್ ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲೇ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ಈ ಮಧ್ಯೆ ಬೆಳಗಾವಿ ಕಿಣಯೇ ಪಿಡಿಒಗೆ ಮರಾಠಿ ಮಾತನಾಡುವಂತೆ ಅವಾಜ್ ಹಾಕಿ ಜೈಲು ಪಾಲಾಗಿ ಬಂದ ಯುವಕನಿಗೆ ಎಂಇಎಸ್ ಮುಖಂಡರು ಸತ್ಕರಿಸಿ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಜ್ಯದ ವಿವಿಧ ಮಾರ್ಗಗಳಿಗೆ ಬಸ್‌ಗಳು ಕಾರ್ಯಾಚರಣೆ ಎಂದಿನಂತೆ ಇತ್ತು. ನಗರದಲ್ಲಿ ಹೋಟೆಲ್, ಅಂಗಡಿ, ಖಾಸಗಿ ವಾಹನ ಎಂದಿನಂತೆ ಕಾರ್ಯಾರಂಭ ಮಾಡಿದ್ದವು. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳುವ ಸಾರಿಗೆ ಬಸ್ ಹಾಗೂ ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುವ ಮಹಾರಾಷ್ಟ್ರ ಸಾರಿಗೆ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಸ್ ನಿಲ್ದಾಣ, ರಾಣಿ ಚನ್ನಮ್ಮನ ವೃತ್ತದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.
ಪ್ರತಿಭಟನಾಕಾರರು ವಶಕ್ಕೆ: ಕರ್ನಾಟಕ ಬಂದ್ ಬೆಂಬಲಿಸಿ ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮನ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ರಾಜ್ಯದಲ್ಲಿ ಎಂಇಎಸ್ ನಿಷೇಧಿಸಬೇಕು ಎಂದು ಘೋಷಣೆ ಕೂಗಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಈ ವೇಳೆ ಪರಸ್ಪರರ ವಾಗ್ವಾದ, ನೂಕಾಟ, ತಳ್ಳಾಟ ನಡೆಯಿತು. ಬಳಿಕ ಬಂಧಿಸಿ, ಬಿಡುಗಡೆಗೊಳಿಸಲಾಯಿತು.
ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧ ಮಾಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಒಂದು ವೇಳೆ ನಿಷೇಧಿಸಿದರೂ ಬೇರೆ ಸಂಘಟನೆ ರಚನೆ ಮಾಡುತ್ತಾರೆ. ಹೀಗಾಗಿ ನಮ್ಮಲ್ಲಿರುವ ಮರಾಠಿ ಭಾಷಿಕರನ್ನು ಮುಖ್ಯವಾಹಿನಿಗೆ ತರಲು ನಾವು ಪ್ರಯತ್ನಿಸಬೇಕು. ಮಹಾರಾಷ್ಟ್ರ ಸರ್ಕಾರಕ್ಕೆ ಅಲ್ಲಿನ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿನ ಮರಾಠಿಗರಿಗೆ ಹೇಗೆ ಸೌಲಭ್ಯ ಕಲ್ಪಿಸಲು ಸಾಧ್ಯ?. ಸತೀಶ ಜಾರಕಿಹೊಳಿ, ಸಚಿವ