

ಲಕ್ಷ್ಮೇಶ್ವರ: ಪಟ್ಟಣದ ಮುಖ್ಯಬಜಾರ್ ರಸ್ತೆಯಲ್ಲಿ ಸಂಚಾರ ಸಮಸ್ಯೆಯಿಂದ ಜನ ಪರದಾಡುತ್ತಿದ್ದಾರೆ.
ಪಟ್ಟಣವು ಅಂದಾಜು 50 ಸಾವಿರ ಜನಸಂಖ್ಯೆ ಹೊಂದಿದ್ದು, ಗದಗ ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರವಾಗಿದೆ. ನಿತ್ಯ ನೆರೆಯ ಸವಣೂರ, ಶಿಗ್ಗಾಂವಿ, ಕುಂದಗೋಳ, ಶಿರಹಟ್ಟಿ ತಾಲೂಕುಗಳಿಂದ ವ್ಯಾಪಾರ-ವಹಿವಾಟು,ಶಿಕ್ಷಣ ಅನೇಕ ಕಾರಣಗಳಿಗಾಗಿ ಜನ ಬರುತ್ತಾರೆ.
ಶಿಗ್ಲಿ ಕ್ರಾಸ್‌ನಿಂದ ದೂದಪೀರಾಂ ದರ್ಗಾ, ಸೋಮೇಶ್ವರ ದೇವಸ್ಥಾನದಿಂದ ಹಳೇ ಬಸ್ ನಿಲ್ದಾಣದವರೆಗಿನ ರಸ್ತೆ, ಸರಾಫ್ ಬಜಾರ್, ಭಾನು ಮಾರ್ಕೆಟ್ ಪ್ರದೇಶಗಳು ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತವೆ. ಶುಕ್ರವಾರದ ಸಂತೆಯ ದಿನ, ಅಮಾವಾಸ್ಯೆ, ಹುಣ್ಣಿಮೆ, ಹಬ್ಬದ ದಿನಗಳಲ್ಲಂತೂ ಟ್ರಾಫಿಕ್ ಕಿರಿಕಿರಿ ಹೇಳತೀರದು.
ರಸ್ತೆಯ ಎರಡೂ ಬದಿ ಕೆಲ ವ್ಯಾಪಾರಸ್ಥರು ಒಂದಷ್ಟು, ಬೀದಿ ಬದಿ ವ್ಯಾಪಾರಸ್ಥರು ಒಂದಿಷ್ಟು ರಸ್ತೆ ಆಕ್ರಮಿಸಿಕೊಂಡಿದ್ದಾರೆ. ಬೈಕ್, ಆಟೋ, ಗೂಡ್ಸ್, ಟ್ರ್ಯಾಕ್ಟರ್, ಲಾರಿಯವರು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಮಾರ್ಕೆಟ್ ಕಿಕ್ಕಿರಿದಿದ್ದರೂ ದೊಡ್ಡ ವಾಹನದವರು ಲೋಡಿಂಗ್/ಅನ್ ಲೋಡಿಂಗ್ ಮಾಡುತ್ತಾರೆ. ವ್ಯವಸ್ಥೆಯನ್ನು ಯಾರೂ ಪ್ರಶ್ನಿಸುವವರೇ ಇಲ್ಲದ್ದರಿಂದ ಜನ-ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ವತಃ ಪರಿಸ್ಥಿತಿ ಅವಲೋಕಿಸಿ ಆದಷ್ಟು ಬೇಗ ರಸ್ತೆ ಕಾಮಗಾರಿ ಪೂರ್ಣಗೊಳಿಸಿದರೆ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ಆದರೂ ಶೇ.70ರಷ್ಟು ಕಾಮಗಾರಿ ನನೆಗುದಿಗೆ ಬಿದ್ದಿದೆ.
ಒಳಚರಂಡಿ ಕಾಮಗಾರಿ ಮತ್ತು ರಸ್ತೆ ಅಭಿವೃದ್ಧಿ(ಸಿಸಿ) ಕಾರ್ಯ ಮುಗಿದ ಬಳಿಕ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಟ್ರಾಫಿಕ್ ಸಮಸ್ಯೆಯನ್ನು ನಿರ್ವಹಿಸಲಾಗುವುದು ಎಂಬುದಾಗಿ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಹೇಳುತ್ತಲೆ ಇದ್ದಾರೆ. ಇನ್ನೊಂದೆಡೆ ಸಿಬ್ಬಂದಿ ಕೊರತೆ, ಪುರಸಭೆಯವರ ಸಹಕಾರ ಬೇಕು ಎಂಬ ಸಬೂಬು ನೀಡಿ ಪೊಲೀಸರೂ ದಿನ ದೂಡುತ್ತಿದ್ದಾರೆ. ಇತ್ತ ರಸ್ತೆ ಅಭಿವೃದ್ಧಿಗೆ ಮೂರ‌್ನಾಲ್ಕು ಬಾರಿ ಭೂಮಿಪೂಜೆ ಮಾಡಿದರೂ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ.
ಮುಖ್ಯ ಬಜಾರ್ ರಸ್ತೆ ವಿಸ್ತರಣೆ ಬಳಿಕ ಸಾರ್ವಜನಿಕರು, ವ್ಯಾಪಾರಸ್ಥರ ಒತ್ತಾಯದ ಮೇರೆಗೆ ಒಂದಷ್ಟು ಕಾಲ ಮಾತ್ರ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಮುಂದಾಗಿತ್ತು. ಮುಖ್ಯವಾಗಿ ಪಿಎಸ್‌ಐ ರವಿಚಂದ್ರ ಬಡಫಕೀರಪ್ಪನವರ ಟ್ರಾಫಿಕ್ ನಿಯಂತ್ರಣ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಏಳೆಂಟು ವರ್ಷದಿಂದ ಈ ಬಗ್ಗೆ ಯಾರೊಬ್ಬರೂ ಗಮನಹರಿಸಿಲ್ಲ. ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರು, ವ್ಯಾಪಾರಸ್ಥರು ಸಹಕಾರ ನೀಡಲು ಸಿದ್ಧರಿದ್ದರೂ ಅಧಿಕಾರಿಗಳು ಮೌನವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಒಳಚರಂಡಿ, ಮುಖ್ಯಬಜಾರ್ ರಸ್ತೆ ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಸಂಚಾರ ನಿಯಂತ್ರಣ ಮತ್ತು ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ಹಲವಾರು ಕಾರಣಗಳಿಂದ ರಸ್ತೆ ಕಾಮಗಾರಿ ಪ್ರಾರಂಭವಾಗಿಲ್ಲ. ನಿತ್ಯವೂ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತಿದ್ದು, ಈ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.ಶಂಕರ ಹುಲ್ಲಮ್ಮನವರ, ಮುಖ್ಯಾಧಿಕಾರಿ