

ಅಕ್ಕಿಆಲೂರ: ಪ್ರತಿ ಮಂಗಳವಾರ ಪಟ್ಟಣದಲ್ಲಿ ನಡೆಯುವ ಸಾಲು ಸಂತೆ ಈಗ ರಾಷ್ಟ್ರೀಯ ಹೆದ್ದಾರಿಯತ್ತ ಬಂದಿದ್ದು, ವಾಹನ ದಟ್ಟಣೆ ಹಾಗೂ ಜನಸಂದಣಿ ಅಧಿಕವಾಗಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದನ್ನು ತಡೆಗಟ್ಟಲು ಹೆದ್ದಾರಿ ಪಕ್ಕ ಸಂತೆ ಹಚ್ಚುವ ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ.
ಮಲೆನಾಡು ಹಾಗೂ ಬಯಲುಸೀಮೆ ಭಾಗದ ಜನತೆಗೆ ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚು ಅನುಕೂಲವಾಗಿರುವ ಪಟ್ಟಣದಲ್ಲಿ ಪ್ರತಿ ಮಂಗಳವಾರ ನಡೆಯುವ ಸಾಲುಸಂತೆ ವಾರ ಕಳೆದಂತೆ ಅಂಗಡಿ-ಮುಂಗಟ್ಟುಗಳು ಹೆಚ್ಚಾಗುತ್ತಿದೆ. ಇದರಿಂದ ಪರಸ್ಥಳದಿಂದ ಬರುವ ವ್ಯಾಪಾರಸ್ಥರು, ವ್ಯಾಪಾರ ಮಾಡಲು ಸೂಕ್ತ ಜಾಗ ಸಿಗದೆ, ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಪ್ರತಿ ಮಂಗಳವಾರಕ್ಕೊಮ್ಮೆ ಜನಸಂದಣಿ ಹೆಚ್ಚಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮೊದಲು ಸಿಂಧೂರ ಸಿದ್ದಪ್ಪ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ, ಪೇಟೆ ಓಣಿ, ಮೇಲಿನಕೇರಿವರೆಗೂ ಕಿಲೋಮೀಟರ್ಗಟ್ಟಲೆ ಇದ್ದ ಅಂಗಡಿಗಳು ನಿಧಾನವಾಗಿ ರಾಷ್ಟ್ರೀಯ ಹೆದ್ದಾರಿಯವರೆಗೂ ವ್ಯಾಪಿಸುತ್ತಿದೆ. ಖರೀದಿಗೆ ಬರುವವರು ತಮ್ಮ ವಾಹನಗಳನ್ನು ಹೆದ್ದಾರಿ ಬದಿ ನಿಲ್ಲಿಸುತ್ತಿದ್ದಾರೆ. ಸ್ಥಳೀಯರು ದಿನಸಿ ತೆಗೆದುಕೊಳ್ಳಲು ನಿಲ್ಲುತ್ತಾರೆ ಹಾಗೂ ವಾಹನಗಳನ್ನು ನಿಲ್ಲಿಸುತ್ತಾರೆ. ಹೀಗಾಗಿ ಪ್ರತಿ ಮಂಗಳವಾರ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಇಲ್ಲಿರುವ ಜಾನುವಾರು ಸಂತೆಯಲ್ಲೂ ಜನಜಂಗುಳಿ ಹೆಚ್ಚುತ್ತಿದ್ದು, ಜಾನುವಾರ ತೆಗೆದುಕೊಂಡು ಬಂದ ವಾಹನಗಳನ್ನು ಹೆದ್ದಾರಿಯಲ್ಲಿ ಪಾರ್ಕ್ ಮಾಡಲಾಗುತ್ತಿದೆ. ಹಾವೇರಿಯಿಂದ ಅಕ್ಕಿಆಲೂರ ಮಾರ್ಗವಾಗಿ ಶಿರಸಿ, ಶಿವಮೊಗ್ಗ ಮತ್ತು ಹಾನಗಲ್ಲ ಭಾಗಕ್ಕೆ ಸಂಚರಿಸುವ ವಾಹನಗಳು ಅಕ್ಕಿಆಲೂರ ದಾಟಲು ಪರದಾಡಬೇಕಾದ ಸ್ಥಿತಿಯಿದೆ. ಹೆದ್ದಾರಿ ಪಕ್ಕ ಸಂತೆ ಹಚ್ಚುವವರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ, ವಾಹನ ಮತ್ತು ಜನದಟ್ಟಣೆಯಾಗದಂತೆ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಆಗ್ರಹಿಸುತ್ತಿದ್ದಾರೆ.
ಪ್ರತಿ ಮಂಗಳವಾರ ಹೆದ್ದಾರಿ ಮೇಲೆ ವಾಹನದೊಂದಿಗೆ ಸಾಗುವುದೇ ದೊಡ್ಡ ಸವಾಲಾಗಿದೆ. ವಾರ ಕಳೆದಂತೆ ಅಂಗಡಿಗಳನ್ನು ಹೆದ್ದಾರಿ ಮೇಲೆ ಹಚ್ಚುತ್ತಿದ್ದಾರೆ. ಪರಸ್ಥಳದಿಂದ ವ್ಯಾಪಾರಕ್ಕಾಗಿ ಆಗಮಿಸುವವರಿಗೆ ಹೆದ್ದಾರಿ ಬದಲು ಬೇರೆ ಸ್ಥಳದಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು. | ಚೇತನಗೌಡ ಪಾಟೀಲ, ಅಕ್ಕಿಆಲೂರ ನಿವಾಸಿ