ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ

ಹಳೇ ಕೆಂಪಯ್ಯನ ಹುಂಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಎಲ್.ಆರ್.ಮಹದೇವಸ್ವಾಮಿ, ಡಾ.ಎಂ.ರೇವಣ್ಣ, ಹೆಳವರಹುಂಡಿ ಸಿದ್ದಪ್ಪ, ಶರತ್ ಪುಟ್ಟಬುದ್ದಿ, ನಗರ್ಲೆ ಮಹದೇವಸ್ವಾಮಿ, ಹಿರಿಯೂರು ಶಿವಕುಮಾರ್ ಇತರರು ಇದ್ದರು.
ಹಳೇ ಕೆಂಪಯ್ಯನ ಹುಂಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಎಲ್.ಆರ್.ಮಹದೇವಸ್ವಾಮಿ, ಡಾ.ಎಂ.ರೇವಣ್ಣ, ಹೆಳವರಹುಂಡಿ ಸಿದ್ದಪ್ಪ, ಶರತ್ ಪುಟ್ಟಬುದ್ದಿ, ನಗರ್ಲೆ ಮಹದೇವಸ್ವಾಮಿ, ಹಿರಿಯೂರು ಶಿವಕುಮಾರ್ ಇತರರು ಇದ್ದರು.
Published on

ತಿ.ನರಸೀಪುರ: ಸಂವಿಧಾನ ಬದಲಾಯಿಸಿ, ಮುಸ್ಲಿಮರಿಗೆ ಮೀಸಲಾತಿ ನೀಡುತ್ತೇವೆಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಖಂಡಿಸಿ ಮಂಗಳವಾರ ತಾಲೂಕಿನ ಹಳೇ ಕೆಂಪಯ್ಯನಹುಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ರಸ್ತೆ ಸಂಚಾರ ತಡೆದು  ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ 212ರ ಜಂಕ್ಷನ್‌ನಲ್ಲಿ ಜಮಾವಣೆಗೊಂಡ ವರುಣ ಹಾಗೂ ನರಸೀಪುರ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು, ವಾಹನಗಳ ಸಂಚಾರಕ್ಕೆ ತಡೆಯೊಡ್ಡುವ ಮೂಲಕ ಕಾಂಗ್ರೆಸ್ ಸಂವಿಧಾನ ವಿರೋಧಿ ನಡವಳಿಕೆ ಅನುಸರಿಸುತ್ತಿದೆ ಎಂದು ಆರೋಪಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಡಿಸಿದರು.

ಒಂದು ತಾಸಿಗೂ ಹೆಚ್ಚು ಕಾಲ ರಸ್ತೆ ಸಂಚಾರ ತಡೆ ನಡೆಸಿದ್ದರಿಂದ ಮೈಸೂರು ಮುಖ್ಯ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಪರಿಣಾಮ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಮಾತನಾಡಿ, ಲೋಕಸಭೆಯಲ್ಲಿ ಸಂವಿಧಾನ ಪುಸ್ತಕ ಹಿಡಿದು ರಾಹುಲ್ ಗಾಂಧಿ ನಗೆಪಾಟಲಿಗೀಡಾದಂತೆ, ಇಲ್ಲಿ ಡಿ.ಕೆ.ಶಿವಕುಮಾರ್ ಸಂವಿಧಾನ ಬದಲಿಸಿ, ಮುಸ್ಲಿಮರಿಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡುತ್ತೇವೆ ಎನ್ನುವ ಮೂಲಕ ಸಂವಿಧಾನದ ಮೇಲಿನ ನಾಟಕದ ಮುಖವಾಡವನ್ನು ಕಳಚಿಟ್ಟಿದ್ದಾರೆ. ಅಧಿಕಾರಕ್ಕಾಗಿ ಮುಸ್ಲಿಮರನ್ನು ತುಷ್ಟೀಕರಣಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ಧರ್ಮ ಆಧಾರಿತ ರಾಜಕಾರಣ ಸಂವಿಧಾನ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಕಿಡಿಕಾರಿದರು.

ಬಿಜೆಪಿ ಮುಖಂಡ ಡಾ.ಎಂ.ರೇವಣ್ಣ ಮಾತನಾಡಿ, ದೇಶದಲ್ಲಿ ಸುದೀರ್ಘ ಅವರಿಗೆ ಅಧಿಕಾರ ನಡೆಸಿದ ಕಾಂಗ್ರೆಸ್ ಓಲೈಕೆ, ಮತ ಬ್ಯಾಂಕಿಗಾಗಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿಗೆ ಮುಂದಾಗಿದೆ. ಅಂಬೇಡ್ಕರ್ ಅವರು ಸಮಾನತೆಯನ್ನು ಬಯಸಿ, ಶೋಷಿತ ಸಮುದಾಯಗಳ ಅಭಿವೃದ್ಧಿಗೆ ನೀಡಿದ್ದ ಮೀಸಲಾತಿಯನ್ನು ಕಾಂಗ್ರೆಸ್ ನಿರಂತರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಇದೇ ವೇಳೆ ಡಿಕೆಶಿ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಡವಾಡಿ ಮಹೇಶ್, ಶರತ್ ಪುಟ್ಟಬುದ್ದಿ, ಜಿಲ್ಲಾ ಉಪಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಎಸ್ಸಿ ಮೋರ್ಚಾ ಅಧ್ಯಕ್ಷ ತೊಟ್ಟವಾಡಿ ಅನಿಲ್, ಜಿಲ್ಲಾ ವಕ್ತಾರ ದಯಾನಂದ ಪಟೇಲ್, ವರುಣ ಕ್ಷೇತ್ರಾಧ್ಯಕ್ಷ ನಗರ್ಲೆ ಮಹದೇವಸ್ವಾಮಿ, ನರಸೀಪುರ ಅಧ್ಯಕ್ಷ ಹಿರಿಯೂರು ಶಿವಕುಮಾರ್, ಮಾಜಿ ಜಿಲ್ಲಾಧ್ಯಕ್ಷ ವೆಂಕಟರಮಣ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡಾ.ಟಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಎನ್.ಎಂ.ರಾಮಚಂದ್ರ, ಗ್ರಾಪಂ ಸದಸ್ಯರಾದ ಕೀ ಕಿರಗಸೂರು ಮಹದೇವಸ್ವಾಮಿ, ಹುಣಸೂರು ಶಿವರಾಜ್, ಕಾರು ಮಲ್ಲಪ್ಪ, ಮುಖಂಡರಾದ ಡಿ.ಎಲ್.ಮಹದೇವಪ್ಪ, ಎಂ. ಎಂ.ಜಯಣ್ಣ, ರಾಜಶೇಖರ, ಚೌಹಳ್ಳಿ ಸಿದ್ದರಾಜು, ದೊಡ್ಡಪುರ ಲಕ್ಷ್ಮಣ್, ತುಂಬಲ ನಂದೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net