

ಬೆಂಗಳೂರು: ವರ್ತುಲ ರಸ್ತೆಯ ಹೆಬ್ಬಾಳ ಜಂಕ್ಷನ್‌ನಿಂದ ವೀರಣ್ಣಪಾಳ್ಯ ಜಂಕ್ಷನ್ ವರೆಗೆ ಸರ್ವಿಸ್ ರಸ್ತೆಯಲ್ಲಿ ರಸ್ತೆಗುಂಡಿ ಮುಚ್ಚುವ ಹಿನ್ನೆಲೆಯಲ್ಲಿ ಭಾನುವಾರ (ಆ.18) ದಿಂದ 3 ದಿನ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಈ ಮೂರೂ ದಿನ ರಾತ್ರಿ 10ರಿಂದ ಬೆಳಗ್ಗೆಯಿಂದ 6ರವರೆಗೆ ಎಲ್ಲ ರೀತಿಯ ವಾಹನಗಳ ಓಡಾಟಕ್ಕೆ ನಿರ್ಬಂಧ ಹಾಕಿದ್ದು, ರಿಂಗ್ ರಸ್ತೆಯ ಮುಖ್ಯ ಕ್ಯಾರೇಜ್‌ನಲ್ಲೇ ವಾಹನ ಸವಾರರು ಸಾಗಬೇಕು ಎಂದು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರ ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆದ ಸಚಿವ ಕೃಷ್ಣಬೈರೇಗೌಡ ಅವರು ‘ಎಕ್ಸ್’ ಖಾತೆಯಲ್ಲಿ ಈ ಸರ್ವಿಸ್ ರಸ್ತೆಯನ್ನು ದುರಸ್ತಿಗೊಳಿಸುವಂತೆ ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅಧಿಕಾರಿಗಳನ್ನು ಬೇಡಿಕೊಳ್ಳುವ ರೀತಿ ಸಚಿವರು ಮನವಿ ಮಾಡಿದ್ದಾರೆಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸ ಒದಗಿಸಿತ್ತು.
ಇದೀಗ ಬಿಬಿಎಂಪಿ ಹಾಗೂ ಪೊಲೀಸ್ ವಿಭಾಗದ ಅಧಿಕಾರಿಗಳು ಸಮನ್ವಯ ಸಾಧಿಸಿ ಹಾಳಾಗಿರುವ ಸರ್ವಿಸ್ ರಸ್ತೆಯನ್ನು ದುರಸ್ತಿಪಡಿಸಲು ಮುಂದಾಗಿದ್ದಾರೆ.