ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆ

08M.D.R.1
ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮದ್ದೂರಿನಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಪ್ರತಿಭಟನೆ ಮಾಡಿದರು. ಇಂಡುವಾಳು ಚಂದ್ರಶೇಖರ್, ಎಚ್.ಎಸ್.ಪ್ರಭುಲಿಂಗು, ವಿ.ಎಸ್.ಉಮಾಶಂಕರ್, ಅಣ್ಣೂರು ಮಹೇಂದ್ರ, ಸೊ.ಸಿ.ಪ್ರಕಾಶ್ ಇದ್ದರು.
Published on

ಮದ್ದೂರು: ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಶನಿವಾರ ನಗರದಲ್ಲಿ ಪ್ರತಿಭಟನೆ ಮಾಡಿದರು.

ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಮಾಯಿಸಿದ ಪ್ರತಿಭಟನಕಾರರು, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತು.

ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗು ಮಾತನಾಡಿ, ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವಂತೆ ಎಫ್‌ಆರ್‌ಪಿ ದರ ಅವೈಜ್ಞಾನಿಕವಾಗಿದ್ದು ಕೂಡಲೇ ಪರಿಷ್ಕರಣೆ ಮಾಡಿ ಟನ್ ಕಬ್ಬಿಗೆ 5,000 ರೂ. ನೀಡಬೇಕು. ಕಬ್ಬು ದರ ನಿಗದಿಗೆ ಇಳುವರಿ 10:25 ಮೇಲ್ಪಟ್ಟ ಮಾನದಂಡ ಸರಿ ಇರುವುದಿಲ್ಲ. ಇದನ್ನು ಸರಿಪಡಿಸಿ ಸರಾಸರಿ 9.25 ಇಳುವರಿ ಆಧಾರಿತ ನಿಗದಿಯಾಗಬೇಕು ಎಂದು ಒತ್ತಾಯಿಸಿದರು.

ಸರ್ಕಾರಗಳು ಈ ಕೂಡಲೇ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ರಾಜ್ಯಾದಂತ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೆ.ಆರ್.ಪೇಟೆ ತಾಲೂಕಿನ ಮೂಡಲಹಳ್ಳಿ ರೈತ ಎಂ.ಬಿ. ಮಂಚೇಗೌಡ ಎಂಬ ರೈತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು ಎಂದರು.

ಸರ್ಕಾರ ರೈತನ ಬಳಿ ವಶಪಡಿಸಿಕೊಂಡ ಜಮೀನಿಗೆ ಪರಿಹಾರವಾಗಿ ಹಣ ಮತ್ತು ಪರ್ಯಾಯವಾಗಿ ಕೃಷಿ ಜಮೀನು ಮಂಜೂರು ಮಾಡಿಲ್ಲ. ಕೆ.ಆರ್.ಪೇಟೆ ತಾಲೂಕು ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿಳಂಬ ಧೋರಣೆಯೇ ಪ್ರಮುಖ ಕಾರಣ ಎಂದು ಆರೋಪಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಎರಡು ದಿವಸಗಳ ಕಾಲ ಅಲೆದರೂ ಮನವಿ ಸ್ವೀಕರಿಸಲು ರೈತ ಮಂಚೇಗೌಡ ಅವರಿಗೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಅವಕಾಶ ನೀಡಲಿಲ್ಲ. ಇದಕ್ಕಾಗಿ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಸತ್ಯ ಸಂಗತಿ ಎಂದರು.

ರೈತ ಮಾಡಿರುವ ಸಂಪೂರ್ಣ ಸಾಲಮನ್ನಾ ಮಾಡಬೇಕು. ಮೃತ ರೈತನ ಕುಟುಂಬಕ್ಕೆ ಇಪ್ಪತೈದು ಲಕ್ಷ ರೂ. ಪರಿಹಾರ ನೀಡಬೇಕು. ಪರ್ಯಾಯವಾಗಿ ಕೃಷಿ ಜಮೀನು ನೀಡಬೇಕು ಎಂದು ಒತ್ತಾಯಿಸಿದರಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಕರ್ತರಾದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್ ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ತಾಲೂಕು ಅಧ್ಯಕ್ಷ ಪ್ರಭುಲಿಂಗ, ಮುಖಂಡರಾದ ನಾರಾಯಣ, ಅಣ್ಣೂರು ಮಹೇಂದ್ರ, ಮಂಜೇಶ್‌ಗೌಡ, ಸೊ.ಸಿ.ಪ್ರಕಾಶ್, ಕೀಳಘಟ್ಟ ನಂಜುಂಡಯ್ಯ, ಕುದರಗುಂಡಿ ನಾಗರಾಜ, ಪಣ್ಣೆ ದೊಡ್ಡಿ ವೆಂಕಟೇಶ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ಗೌರವಾಧ್ಯಕ್ಷರುಗಳಾದ ಪಟೇಲ್‌ಹರೀಶ್, ವಿ.ಎಚ್.ಶಿವಲಿಂಗಯ್ಯ, ಎಂ.ವೀರಪ್ಪ, ಪದಾಧಿಕಾರಿಗಳಾದ ಜಗದೀಶ್, ಉಮೇಶ, ಸಿದ್ದರಾಮ, ಕೆಂಚಪ್ಪ, ವರದರಾಜು ಶ್ರೀನಿವಾಸ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net