

ಹನೂರು: ನಿಯೋಜಿತ ಕಾರ್ಯಗಳಿಗೆ ವಾಹನಗಳನ್ನು ಬಳಕೆ ಮಾಡಿಕೊಳ್ಳುವುದರ ಜತೆಗೆ ನಿತ್ಯ ಕೈಗೊಳ್ಳಲಾದ ಕಾರ್ಯದ ಬಗ್ಗೆ ಮಾಹಿತಿ ಪುಸ್ತಕದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ಸೂಚಿಸಿದರು.
ಪ್ರಾಧಿಕಾರ ವತಿಯಿಂದ ಸೇವಾ ಕಾರ್ಯಗಳಿಗೆ ನೀಡಲಾಗಿರುವ ಸ್ವಚ್ಛತಾ, ಅಂಗವಿಕಲ, ಜನವನ ಹಾಗೂ ಇತರ ಲಘು ವಾಹನಗಳ ಸ್ಥಿತಿಗತಿಯ ಬಗ್ಗೆ ಮ.ಬೆಟ್ಟದ ನಾಗಮಲೆ ಆವರಣದಲ್ಲಿ ಮಂಗಳವಾರ ಚಾಲಕರಿಂದ ಮಾಹಿತಿ ಪಡೆದು ಮಾತನಾಡಿದರು.
ಮ.ಬೆಟ್ಟಕ್ಕೆ ಇತ್ತೀಚೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿದೆ. ಹಾಗಾಗಿ, ಅಗತ್ಯ ಮೂಲಸೌಕರ್ಯ ಒದಗಿಸುವುದರ ಜತೆಗೆ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆ ಮೂಲಕ ಶ್ರೀ ಕ್ಷೇತ್ರದ ನೈರ್ಮಲ್ಯ ಕಾಪಾಡಬೇಕಿದೆ. ಈ ಕಾರ್ಯಕ್ಕೆ ವಾಹನಗಳನ್ನೂಒದಗಿಸಲಾಗಿದೆ ಎಂದರು.
ಇಂಡಿಗನತ್ತ, ತೊಳಸಿಕೆರೆ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜನವನ ವಾಹನ ಸೌಕರ್ಯವನ್ನೂ ಕಲ್ಪಿಸಿದೆ. ಇನ್ನು ದೇಗುಲಕ್ಕೆ ಆಗಮಿಸುವ ಅಂಗವಿಕಲರನ್ನು ಕರೆದೊಯ್ಯಲು ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ, ನಿಯೋಜನೆಗೊಂಡ ಚಾಲಕರು ಯಾವುದೇ ಲೋಪದೋಷವಿಲ್ಲದಂತೆ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ವಾಹನಗಳನ್ನು ಅನ್ಯ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬಾರದು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು. ಒಂದು ವೇಳೆ ಏನಾದರೂ ಸಮಸ್ಯೆಗಳಿದ್ದಲ್ಲಿ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಸುಸ್ಥಿತಿಯಲ್ಲಿಟ್ಟುಕೊಳ್ಳಿ: ವಾಹನಗಳಿಂದ ಉತ್ತಮ ಸೇವೆ ಒದಗಿಸಲಾಗುತ್ತಿದೆ. ಹಾಗಾಗಿ, ಕಾರ್ಯಕ್ಕೆ ಬಳಕೆ ಮಾಡಿದ ಬಳಿಕ ವಾಹನವನ್ನು ಆಯಾ ದಿನವೇ ತಪಾಸಣೆ ನಡೆಸುವುದರ ಮೂಲಕ ಸುಸ್ಥಿಯಲ್ಲಿಟ್ಟುಕೊಳ್ಳಬೇಕು. ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ದುರಸ್ತಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕೈಗೊಂಡ ಕಾರ್ಯದ ಬಗ್ಗೆ ಮಾಹಿತಿ ಪುಸ್ತಕದಲ್ಲಿ ನಮೂದಿಸಬೇಕು. ಇನ್ನು ತುರ್ತು ಅವಶ್ಯಕತೆ ಇದ್ದ ಸಂದರ್ಭದಲ್ಲಿ ಚಾಲಕರು ಕಾರ್ಯಕ್ಕೆ ಸಿದ್ಧರಾಗಿರಬೇಕು ಎಂದು ತಿಳಿಸಿದರು.
ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಲಘು ವಾಹನಗಳ ಮೇಲ್ವಿಚಾರಕ ಮಲ್ಲಿಕಾರ್ಜುನ್ ಹಾಗೂ ಚಾಲಕರು ಇದ್ದರು.