ವಾಹನಗಳು ಫಿಟ್ನೆಸ್ ಪ್ರಮಾಣಪತ್ರ ಹೊಂದಿರಲಿ

2
ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಮುಖ್ಯಸ್ಥರ ಸಭೆಯಲ್ಲಿ ಡಿವೈಎಸ್‌ಪಿ ಬಿ.ಎಸ್.ತಳವಾರ ಮಾತನಾಡಿದರು. ಪಿಐ ದುರುಗಪ್ಪ, ಗ್ರಾಮೀಣ ಸಿಪಿಐ ವೀರಾರಡ್ಡಿ, ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ವೆಂಕಟೇಶ, ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ವೈ.ನರೇಂದ್ರನಾಥ, ಕಾರ್ಯದರ್ಶಿ ವೀರೇಶ ಅಗ್ನಿ ಇತರರಿದ್ದರು.
Published on

ಸಿಂಧನೂರು: ಖಾಸಗಿ ಶಾಲೆ-ಕಾಲೇಜುಗಳ ಮೇಲಿನ ನಂಬಿಕೆಯಿಂದ ಪಾಲಕರು ಮಕ್ಕಳನ್ನು ಕಳುಹಿಸುತ್ತಾರೆ. ಮಕ್ಕಳ ಪ್ರಾಣ ಬಹುಮುಖ್ಯವಾಗಿದ್ದು, ಮಕ್ಕಳ ಸುರಕ್ಷತೆ ಬಗ್ಗೆ ಆಡಳಿತ ಮಂಡಳಿ ಜವಾಬ್ದಾರಿ ವಹಿಸಬೇಕು ಎಂದು ಡಿವೈಎಸ್‌ಪಿ ಬಿ.ಎಸ್.ತಳವಾರ ಸೂಚನೆ ನೀಡಿದರು.

ನಗರ ಪೊಲೀಸ್ ಠಾಣೆಯಲ್ಲಿ ಖಾಸಗಿ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಮುಖ್ಯಸ್ಥರ ಸಭೆ ಶುಕ್ರವಾರ ನಡೆಸಿ ಮಾತನಾಡಿದರು.
ಮಾನ್ವಿ ದುರ್ಘಟನೆ ಎಲ್ಲರಿಗೂ ಪಾಠವಾಗಬೇಕು. ಪ್ರತಿ ಆಡಳಿತ ಮಂಡಳಿ ಮುಂಜಾಗ್ರತಾ ಕ್ರಮ ವಹಿಸಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ತಮ್ಮ ಶಾಲೆಯ ಬಸ್ ಹಾಗೂ ಇತರ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ, ಇನ್ಶೂರೆನ್ಸ್ ಹೊಂದಿರಬೇಕು.

ಚಾಲನಾ ಪರವಾನಗಿ ಪಡೆದ ಚಾಲಕನಿಗೆ ಮಾತ್ರ ವಾಹನಗಳನ್ನು ಓಡಿಸಲು ಅವಕಾಶ ಕೊಡಬೇಕು. ಪ್ರತಿ ವಾಹನಕ್ಕೆ ಚಾಲಕರ ಜೊತೆಗೆ ಸಹಾಯಕರನ್ನು ನೇಮಿಸಿಕೊಳ್ಳಬೇಕು. ಪ್ರತಿ ವಾರ ಚಾಲಕರ ಸಭೆ ನಡೆಸಿ ಮಕ್ಕಳ ಸುರಕ್ಷತೆ, ಸಂಚಾರಿ ನಿಯಮಗಳ ಬಗ್ಗೆ ಮಾಹಿತಿ ನೀಡಬೇಕು. ಹೊಸ ಚಾಲಕರಿಗೆ ಬಸ್ ಓಡಿಸಲು ಅವಕಾಶ ಮಾಡಿಕೊಡಬಾರದು.

ಇತ್ತೀಚಿನ ದಿನಗಳಲ್ಲಿ ಮಾದರಿ ಶಿಕ್ಷಣ ಮರೆಯಾಗುತ್ತಿದ್ದು, ಅತ್ಯಾಚಾರ ಸೇರಿದಂತೆ ಅಕ್ರಮ ಚಟುವಟಿಕೆಗಳು ಯಥೇಚ್ಛವಾಗಿದ್ದು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಡಳಿತ ಮಂಡಳಿಗಳು ಕಾರ್ಯೋನ್ಮುಖರಾಗಬೇಕು ಎಂದರು.


ಪಿಐ ದುರುಗಪ್ಪ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಬಸ್‌ಗಳ ಸುರಕ್ಷತೆ ಬಗ್ಗೆ ಆಗಾಗ ಪರಿಶೀಲಿಸಬೇಕು. ಶಾಲೆಯ ವೇಳಾ ಅವಧಿ ಭಯದಿಂದ ಅತೀ ವೇಗದಿಂದ ವಾಹನ ಚಲಾಯಿಸಬಾರದು. ಪೊಲೀಸ್ ಇಲಾಖೆಯಿಂದಲೂ ಪ್ರತಿದಿನ ಪರಿಶೀಲನೆ ಮಾಡಲಾಗುವುದು. ತಪ್ಪು ಕಂಡುಬಂದರೆ ಆಡಳಿತ ಮಂಡಳಿಯನ್ನೇ ನೇರ ಹೊಣೆಯಾಗಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net