

ಲಿಂಗಸುಗೂರು: ಸಮೀಪದ ಸರ್ಜಾಪುರ-ಚಿಕ್ಕಹೆಸರೂರು ಬಳಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಜೋಳ ಮಾರಾಟಕ್ಕೆ ತೆರಳುತ್ತಿದ್ದ ಮಹಿಂದ್ರಾ ಸುಪ್ರೋ ವಾಹನದ ಟೈರ್ ಸ್ಫೋಟಗೊಂಡು, ಅದರಲ್ಲಿದ್ದ ಆಶಾಕಾರ್ಯಕರ್ತೆ ಸೇರಿ ನಾಲ್ವರು ಮಂಗಳವಾರ ಗಾಯಗೊಂಡಿದ್ದಾರೆ. ಮಸ್ಕಿ ತಾಲೂಕಿನ ಆನಂದಗಲ್‌ನಿಂದ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಗಂಗಮ್ಮ ನಿರುಪಾದಿ ಎಂಬ ಗರ್ಭಿಣಿ ಮಹಿಳೆಗೆ ಚಿಕಿತ್ಸೆ ಕೊಡಿಸಲು ಆಶಾ ಕಾರ್ಯಕರ್ತೆ ಸಿದ್ಧಮ್ಮ ಜಗನ್ನಾಥ ಹಾಗೂ ಇತರರು ವಾಹನದಲ್ಲಿ ತೆರಳುತ್ತಿದ್ದರು. ಲಕ್ಷ್ಮೀ ಹನುಮಂತ ಆನಂದಗಲ್ ಗಂಭೀರವಾಗಿ ಗಾಯಗೊಂಡಿದ್ದು, ಜತೆಗೆ ಗರ್ಭಿಣಿ ಸ್ತ್ರೀ ಗಂಗಮ್ಮ ನಿರುಪಾದಿ, ಎರಡು ವರ್ಷದ ಮಗು ರಂಜಿತಾ, ಮೌನೇಶ ಬೂದಿಹಾಳ, ಮಂಜುನಾಥ ಹೊನ್ನಳ್ಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.