ಸಿನಿಮೀಯ ಶೈಲಿಯಲ್ಲಿ ವಾಹನ ಅಪಹರಣ

Crime
Published on

ಉಡುಪಿ: ದೀಪಾವಳಿ ಫ್ಯಾಕ್ಟರಿ ಪೂಜೆ ಅಂಗವಾಗಿ ಗೂಡ್ಸ್ ವಾಹನವನ್ನು ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿಗೆ ಬೈಕ್‌ನಲ್ಲಿ ಆಗಮಿಸಿದ ಆಗಂತುಕನೊಬ್ಬ ಕಲ್ಲಿನಿಂದ ಹಲ್ಲೆ ನಡೆಸಿ ವಾಹನ ಅಪಹರಣ ಮಾಡಿದ ಘಟನೆ ಗುರುವಾರ ಸಾಯಂಕಾಲ ಪೆರ್ಡೂರಿನಲ್ಲಿ ನಡೆದಿದೆ.

ವಡ್ಡಮೇಶ್ವರ ನಿವಾಸಿ ಸಂದೀಪ್ ಶೆಣೈ (26) ಅವರ ಫ್ಯಾಕ್ಟರಿಯಲ್ಲಿ ರಮೇಶ್ ಎಂಬುವರು ಗೂಡ್ಸ್ ಟೆಂಪೋ ವಾಹನವನ್ನು ಸ್ವಚ್ಛಗೊಳಿಸುತ್ತಿದ್ದರು. ಈ ಸಂದರ್ಭ ಮೋಟಾರು ಸೈಕಲಿನಲ್ಲಿ ಆಗಮಿಸಿದ ಅಪರಿಚಿತ ವ್ಯಕ್ತಿ ಏಕಾಏಕಿ ಕಲ್ಲಿನಿಂದ ಮುಖಕ್ಕೆ ಹೊಡೆದು ವಾಹನದ ಕೀ ಕಸಿದುಕೊಂಡು ಹೆಬ್ರಿ ಕಡೆಗೆ ಹೋಗಿದ್ದ. ಕೂಡಲೇ ಶೆಣೈ ಅವರು ದೊಡ್ಡಪ್ಪನ ಮಗ ಸಚಿನ್ ಶೆಣೈ ಅವರಿಗೆ ಕರೆ ಮಾಡಿ ವಾಹನ ಅಡ್ಡಕಟ್ಟುವಂತೆ ವಿನಂತಿಸಿದ್ದರು. ನಂತರ ಬ್ರಹ್ಮಾವರ, ಪೇತ್ರಿ, ಕುಕ್ಕೆಹಳ್ಳಿ, ಸಂತೆಕಟ್ಟೆ ಮೊದಲಾದ ಕಡೆ ಟೆಂಪೋದಲ್ಲಿ ಸುತ್ತಾಡಿದ ವ್ಯಕ್ತಿಯನ್ನು ಕೊಳಲಗಿರಿ ಚರ್ಚ್ ರಸ್ತೆಯಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು.

ಆರೋಪಿಯನ್ನು ಚಿತ್ರದುರ್ಗದ ನಿಶಾಂತ್ ಕವಾಡಿ ಎಂದು ಗುರುತಿಸಲಾಗಿದೆ. ವಾಹನದ ಬಂಪರ್, ಎಡ ಬದಿಯ ಡೋರ್, ಎಡಬದಿಯ ವೀಲ್ ಡಿಸ್ಕ್, ಬಾಡಿ ಜಖಂಗೊಂಡಿದ್ದು, ಇಂಜಿನ್ ಸೀಜ್ ಆಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net