

ಬೆಳಗಾವಿ: ತಾಲೂಕಿನ ಬೆಕ್ಕಿನಕೇರಿ ಗ್ರಾಮದ ಮನೆಯೊಂದರ ಬಳಿ ಆಟವಾಡುತ್ತಿದ್ದ ಇಬ್ಬರು ಬಾಲಕರು ಕಾಲು ಜಾರಿ ಆಕಸ್ಮಿಕವಾಗಿ ತೆರೆದ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ಬೆಕ್ಕಿನಕೇರಿಯ ಲೋಕೇಶ ವಿಠ್ಠಲ ಪಾಟೀಲ (10) ಹಾಗೂ ಮಹಾರಾಷ್ಟ್ರದ ದಕೊಳೆ ಗ್ರಾಮದ ನಿಖಿಲ್ ರಾಮು ಬೊಂದ್ರೆ (8) ಮೃತ ಬಾಲಕರು. ಹತ್ತಿರದಲ್ಲೇ ಆಟವಾಡುತ್ತಿದ್ದ ಇನ್ನೊಬ್ಬ ಬಾಲಕ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ.
ನಿಖಿಲ್ ಎಂಬಾತ ಬೆಕ್ಕಿನಕೇರಿಯಲ್ಲಿರುವ ತನ್ನ ಸಂಬಂಧಿಗಳ ಮನೆಗೆ ಆಗಮಿಸಿದ್ದನು. ಬಾಲಕರು ಬಾವಿಯಲ್ಲಿ ಬಿದ್ದು ಮೃತಪಟ್ಟ ಸುದ್ದಿ ಬೆಕ್ಕಿನಕೇರಿ ಗ್ರಾಮವನ್ನು ತಲ್ಲಣಗೊಳಿಸಿದೆ. ಕಾಕತಿ ಠಾಣೆ ಸಿಪಿಐ ರಾಘವೇಂದ್ರ ಹಳ್ಳೂರ, ಪಿಎಸ್‌ಐ ಅವಿನಾಶ ಶಿವಾನಂದ ಕೌಜಲಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.