

ದೊಡ್ಡಬಳ್ಳಾಪುರ ಗ್ರಾಮಾಂತರ: ಲಾಕ್‌ಡೌನ್ ಸಡಿಲಗೊಂಡ ಹಿನ್ನೆಲೆಯಲ್ಲಿ ನಗರದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಟಿ.ಬಿ. ವೃತ್ತದಲ್ಲಿ ತಪಾಸಣೆ ನಡೆಸುತ್ತಿರುವ ಪೊಲೀಸರು ನಕಲಿ ಪಾಸ್ ಬಳಸಿ ಸಂಚರಿಸುತ್ತಿದ್ದ 2 ಕಾರು, 20 ದ್ವಿಚಕ್ರ ವಾಹನ ಮತ್ತು ಚಾಲಕರನ್ನು ವಶಕ್ಕೆ ಪಡೆದಿದ್ದಾರೆ.
ಗೌರಿಬಿದನೂರಿನಿಂದ ಬೆಂಗಳೂರು ಕಡೆ ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಟಿ.ಬಿ. ವೃತ್ತದಲ್ಲಿ ಕಡ್ಡಾಯವಾಗಿ ವಾಹನ ತಪಾಸಣೆ ನಡೆಸಲಾಗುತ್ತಿದೆ. ಗೌರಿಬಿದನೂರಿನಿಂದ ಬರುವ ಕೆಲವು ಕಾರುಗಳಲ್ಲಿ ನಕಲಿ ಪಾಸ್ ಅಂಟಿಸಿಕೊಂಡಿದ್ದು, ಅಂತಹ ವಾಹನ ಮತ್ತು ಚಾಲಕರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಗೌರಿಬಿದನೂರು-ಬೆಂಗಳೂರು, ದೊಡ್ಡಬಳ್ಳಾಪುರ- ದಾಬಸ್‌ಪೇಟೆ, ದೇವನಹಳ್ಳಿ- ದೊಡ್ಡಬಳ್ಳಾಪುರ ಹೆದ್ದಾರಿಯ ರಸ್ತೆಗಳಲ್ಲಿ ಶನಿವಾರ ವಾಹನ ಸಂಚಾರ ಅಧಿಕವಾಗಿತ್ತು.
ಪೊಲೀಸರು ಪ್ರಮುಖ ವೃತ್ತಗಳಲ್ಲಿ ವಾಹನ ತಪಾಸಣೆ ನಡೆಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕ್ವಾರಂಟೈನ್ ಶಿಕ್ಷೆ: ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುವ ಸವಾರರಿಗೆ ಕಡ್ಡಾಯವಾಗಿ 10 ದಿನ ಕ್ವಾರಂಟೈನ್ ಮಾಡಲು ಸೂಚಿಸಲಾಗಿದೆ.