

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಫೆ.27ರಂದು ಬೆಳಗ್ಗೆ 11 ಗಂಟೆಯಿಂದ ಕಾರ್ಯಕ್ರಮ ಮುಗಿಯುವರೆಗೆ ಸಾರ್ವಜನಿಕರು, ವಾಹನ ಸವಾರರು ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಲು ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಕೊಲ್ಲಾಪುರ, ನಿಪ್ಪಾಣಿ, ಚಿಕ್ಕೋಡಿ, ಅಥಣಿ, ಸಂಕೇಶ್ವರ, ಕಾಕತಿ ಕಡೆಯಿಂದ ಬೆಳಗಾವಿ ನಗರ ಪ್ರವೇಶಿಸಿ ಖಾನಾಪುರ, ಗೋವಾ ಕಡೆಗೆ ಸಂಚರಿಸುವ ಹಿಂಡಾಲ್ಕೊ, ಬಾಕ್ಸೈಟ್ ರಸ್ತೆ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ವೃತ್ತ, ತಿಮ್ಮಯ್ಯ ರಸ್ತೆ, ಕೇಂದ್ರಿಯ ವಿದ್ಯಾಲಯ, ನೆಲ್ಸನ ರಸ್ತೆ, ಮಿಲ್ಟ್ರಿ ಮಹಾದೇವ ಮಂದಿರ, ಕಾಂಗ್ರೆಸ್ ರಸ್ತೆ ಸೇರಿ ಸಂಚರಿಸುವುದು.
ಶಹಾಪುರ, ಅನಗೋಳ, ವಡಗಾಂವ, ಯಳ್ಳೂರ ಬಾಚಿ ಕಡೆಯಿಂದ ಕಾಕತಿ, ನಿಪ್ಪಾಣಿ ಕಡೆ ಸಂಚರಿಸುವ ವಾಹನಗಳು ಅನಗೋಳ ನಾಲ್ಕನೇ ರೈಲ್ವೆ ಗೇಟ್, ಮೂರನೇ ರೈಲ್ವೇ ಗೇಟ್, ಕಾಂಗ್ರೆಸ್ ರಸ್ತೆ, ಮಿಲ್ಟ್ರಿ ಮಹಾದೇವ ಮಂದಿರ ಹತ್ತಿರ ಎಡತಿರುವ ಪಡೆದುಕೊಂಡು ತಿಮ್ಮಯ್ಯ ರಸ್ತೆ, ಗಾಂಧಿ ವೃತ್ತ, ಬಾಕ್ಸೈಟ್ ರಸ್ತೆ ಮೂಲಕ ಸಂಚರಿಸುವುದು.
ಬೆಳಗಾವಿ ನಗರದಿಂದ ಕಾಕತಿ, ನಿಪ್ಪಾಣಿ, ಬೈಲಹೊಂಗಲ, ಗೋಕಾಕ, ಧಾರವಾಡ, ಸವದತ್ತಿ, ಹಿರೇಬಾಗೇವಾಡಿ ಕಡೆ ಸಂಚಿಸುವ ವಾಹನಗಳು ಕೃಷ್ಣದೇವರಾಯನ ವೃತ್ತ, ಕೆಎಲ್‌ಇ ಆಸ್ಪತ್ರೆ ರಸ್ತೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸುವುದು. ಸಾಂಬ್ರಾ, ನೇಸರಗಿ, ಯರಗಟ್ಟಿ, ಬಾಗಲಕೋಟೆ, ವಿಜಯಪುರ ಕಡೆ ಸಂಚರಿಸುವ ವಾಹನಗಳು ಬೆಳಗಾವಿ-ಗೋಕಾಕ ಹೆದ್ದಾರಿ ಮೂಲಕ ಖನಗಾಂವಿ ಕ್ರಾಸ್, ಸುಳೇಭಾವಿ ಗ್ರಾಮದ ಮೂಲಕ ಬಾಗಲಕೋಟೆ ರಸ್ತೆ ಸೇರಬಹುದು.
ಧಾರವಾಡ, ಬೈಲಹೊಂಗಲ, ಹಿರೇಬಾಗೇವಾಡಿ ಕಡೆಯಿಂದ ಬೆಳಗಾವಿ ನಗರ ಪ್ರವೇಶಿಸುವ ವಾಹನಗಳು ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಿ ನಿಸರ್ಗ ಧಾಬಾ ಹತ್ತಿರ ಎಡ ತಿರುವುದು ಪಡೆದುಕೊಂಡು ಕೆಪಿಟಿಸಿಎಲ್ ರಸ್ತೆಯ ಮೂಲಕ ಸಂಚರಿಸಬಹುದು. ಗೋವಾ, ಖಾನಾಪುರ ಕಡೆ ಸಂಚರಿಸುವವರು ಬಾಕ್ಸೈಟ್ ರಸ್ತೆಯ ಮೂಲಕ ಸಂಚರಿಸಬಹುದು.
ವಿಜಯಪುರ, ಬಾಗಲಕೋಟೆ, ಯರಗಟ್ಟಿ, ನೇಸರಗಿ ಕಡೆಯಿಂದ ಬರುವ ವಾಹನಗಳ ಸವಾರರು ಸುಳೇಬಾವಿ ಗ್ರಾಮ, ಖನಗಾಂವಿ ಕ್ರಾಸ್, ಕಣಬರ್ಗಿ ರಸ್ತೆ, ರಾಷ್ಟ್ರೀಯ ಹೆದ್ದಾರಿ ಬಳಿ ನಿಸರ್ಗ ಧಾಬಾ ಬಳಿ ಎಡತಿರುವುದು ಪಡೆದುಕೊಂಡು ಕೆಪಿಟಿಎಲ್ ರಸ್ತೆಯ ಮೂಲಕ ಸಂಚರಿಸಬಹುದು. ಅಲ್ಲದೆ, ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಎಲ್ಲ ಮಾದರಿಯ ಭಾರಿ ವಾಹನಗಳ ನಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.