ವಾಹನ ಸವಾರರಿಗೆ ತೊಂದರೆ ನೀಡಿದರೆ ಕ್ರಮ: ಪೊಲೀಸರಿಗೆ ಎಸ್ಪಿ ಎಚ್ಚರಿಕೆ

bly sp
ರಂಜಿತ್‌ಕುಮಾರ್ ಬಂಡಾರು
Published on

ಬಳ್ಳಾರಿ: ನಗರದಲ್ಲಿ ಸಂಚರಿಸುವ ವಾಹನ ಸವಾರರು, ಚಾಲಕರಿಗೆ ವಿನಾಕಾರಣ ಪೊಲೀಸರು ತೊಂದರೆ ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಎಚ್ಚರಿಕೆ ನೀಡಿದ್ದಾರೆ.


ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಾಹನ ಸವಾರರಿಗೆ ದಾಖಲೆಗಳನ್ನು ಪರಿಶೀಲಿಸುವ ನೆಪದಲ್ಲಿ ತೊಂದರೆ ನೀಡುವಂತಿಲ್ಲ. ಪ್ರತಿ ದಿನ ಬೆಳಗ್ಗೆ 8 ರಿಂದ 11 ಗಂಟೆವರೆಗೆ ಹಾಗೂ ಸಂಜೆ 5 ರಿಂದ 7ರವರೆಗೆ ವಾಹನ ಸವಾರರಿಗೆ ದಂಡ ಹಾಕುವಂತಿಲ್ಲ ಎಂದು ಸೂಚನೆ ನೀಡಿದರು.

ಸಹಾಯವಾಣಿ 9480803083ಗೆ ಕರೆ ಮಾಡಿ ದೂರು ಸಲ್ಲಿಸಿ


ಕಳೆದ ಎಂಟು ತಿಂಗಳಿಂದ ಪೊಲೀಸ್ ಠಾಣೆಗಳಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಅನವಶ್ಯಕವಾಗಿ ಸಾಮಾನ್ಯ ಜನರಿಗೆ ತೊಂದರೆ ಆಗದಂತೆ ಠಾಣೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದಾಗ್ಯೂ ಎಫ್‌ಐಆರ್ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದಲ್ಲಿ, ಲಂಚದ ಬೇಡಿಕೆ ಇಟ್ಟರೆ, ವಿನಾಕಾರಣ ತೊಂದರೆ ಕೊಟ್ಟರೆ ಸಹಾಯವಾಣಿ ನಂಬರ್ ಮೊ; 9480803083ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ದೂರುಗಳ ಬಗ್ಗೆ ಪ್ರತ್ಯೇಕವಾಗಿ ನೋಂದಣಿ ಪುಸ್ತಕದಲ್ಲಿ ದಾಖಲು ಮಾಡಿಕೊಳ್ಳಲಾಗುವುದು ಎಂದರು.


ನಗರದಲ್ಲಿ ಒಟ್ಟು 90 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ 40 ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ 300 ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ನಗರದಲ್ಲಿ ಲಾರಿ ಸೇರಿದಂತೆ ಬೃಹತ್ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲು ಚಿಂತನೆ ನಡೆದಿದೆ. ಖಾಸಗಿ ಬಸ್‌ಗಳ ಓಡಾಟದಿಂದ ಟ್ರಾಫಿಕ್ ಸಮಸ್ಯೆ ಆಗುತ್ತಿರುವ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net