

ಕಂಪ್ಲಿ: ಚಾಲಕರು, ಮಾಲೀಕರು ಸಂಘಟಿತರಾಗಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಸಾರಥಿ ಅಭಿವೃದ್ಧಿ ಸಂಘದ ಕಲ್ಯಾಣ ಕರ್ನಾಟಕ ಘಟಕದ ಉಪಾಧ್ಯಕ್ಷ ಜಾಫರ್ ಸಾಧಿಕ್ ಹೇಳಿದರು.
ಇದನ್ನೂ ಓದಿ:‘ಸಂವಿಧಾನವೇ ನಮ್ಮ ಸಿದ್ಧಾಂತ’ ಸಂಘಟನಾ ಸಭೆ ಇಂದು
ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಭಾನುವಾರ ಪದಾಧಿಕಾರಿಗಳ ಸಂಘಟನಾ ಸಭೆಯಲ್ಲಿ ಮಾತನಾಡಿದರು. ವಾಹನಗಳ ಚಾಲಕರು ಹಾಗೂ ಮಾಲೀಕರು ಅಸಂಘಟಿತರಾಗಿದ್ದು, ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಸಂಘಟಿತರಾಗಿ ಯೋಜನೆಗಳನ್ನು ಪಡೆದುಕೊಳ್ಳಿ ಎಂದರು.
ಸ್ಥಳೀಯ ಘಟಕದ ಅಧ್ಯಕ್ಷ ಬಿ.ಆನಂದಪ್ಪ ಮಾತನಾಡಿ, ಕಾರ್ಮಿಕ ಇಲಾಖೆ ಯೋಜನೆಗಳನ್ನು ವಾಹನ ಚಾಲಕರು ಹಾಗೂ ಮಾಲೀಕರಿಗೆ ನೀಡಲು ಜಿಲ್ಲಾಡಳಿತ ಯೋಜನೆ ರೂಪಿಸಬೇಕು. ಪಟ್ಟಣದಲ್ಲಿ ಗೂಡ್ಸ್, ಟಂಟಂ ವಾಹನಗಳ ನಿಲುಗಡೆಗೆ ಸ್ಥಳ ನಿಗದಿ ಪಡಿಸಬೇಕು. ಚಾಲಕರು ಹಾಗೂ ಮಾಲೀಕರಿಗೆ ವಸತಿ, ನಿವೇಶನ ಸೇರಿದಂತೆ ಮೂಲಸೌಕರ್ಯ ಒದಗಿಸಲು ಪುರಸಭೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಕಲ್ಯಾಣ ಕರ್ನಾಟಕ ಸಾರಥಿ ಅಭಿವೃದ್ಧಿ ಸಂಘದ ಕಂಪ್ಲಿ ತಾಲೂಕು ಘಟಕಕ್ಕೆ ಬಿ.ಆನಂದಪ್ಪ ಅಧ್ಯಕ್ಷ, ಹುಲಿಕುಂಟೇರಾಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಸಂಘದ ಜಿಲ್ಲಾಧ್ಯಕ್ಷ ಎನ್.ಸಲೀಮ್, ಪ್ರಧಾನ ಕಾರ್ಯದರ್ಶಿ ಆಸ್ಲಾಂಬಾಷಾ, ಸಂಘಟನಾ ಕಾರ್ಯದರ್ಶಿ ಅಜಗರ್ ಅಲಿ ಇತರರಿದ್ದರು.