1.68 ಕೋಟಿ ರೂ. ಸ್ವತ್ತು ವಾರಸುದಾರರಿಗೆ ವಾಪಸ್‌

dj dvg police
Published on

ದಾವಣಗೆರೆ: ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ವಿವಿಧ ಸ್ವತ್ತು ಕಳವು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ವಶಪಡಿಸಿಕೊಂಡ 1.68 ಕೋಟಿ ರೂ. ಮೌಲ್ಯದ ವಸ್ತು, ನಗದು, ಒಡವೆಗಳನ್ನು ಬುಧವಾರ ವಾರಸುದಾರರಿಗೆ ಹಿಂದಿರುಗಿಸಲಾಯಿತು.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಪತ್ತೆಯಾದ ಸ್ವತ್ತುಗಳನ್ನು ಸಂಬಂಧಪಟ್ಟವರಿಗೆ ಒಪ್ಪಿಸಲಾಯಿತು.

ಒಟ್ಟು 134 ಪ್ರಕರಣಗಳಲ್ಲಿ 1 ಕೆಜಿ 713 ಗ್ರಾಂ. ಬಂಗಾರ, 2 ಕೆಜಿ 738 ಗ್ರಾಂ. ಬೆಳ್ಳಿ ಆಭರಣ, 16 ಬೈಕ್, ಟ್ರಾೃಕ್ಟರ್ ಮತ್ತು ಬಿಡಿ

ಭಾಗಗಳು, 178 ಕೆಜಿ ಅಡಕೆ, 3 ಮೊಬೈಲ್, 2.31 ಲಕ್ಷ ರೂ. ನಗದು, ಕೃಷಿ ಉಪಕರಣ ಸೇರಿ ಒಟ್ಟು 1.68 ಕೋಟಿ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿತ್ತು.

ಈ ಪ್ರಕರಣಗಳು 2022ರ ಜ. 1ರಿಂದ 2023ರ ಜೂನ್ 30ರ ವರೆಗೆ ದಾಖಲಾಗಿದ್ದವು.

ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಿದ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ ಮಾತನಾಡಿ,

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಠಾಣೆಗಳ ವ್ಯಾಪ್ತಿಯಲ್ಲಿ ಪ್ರಕರಣ ಪತ್ತೆಹಚ್ಚಿರುವ ಬಗ್ಗೆ ಮಾಹಿತಿ ನೀಡಿದರು.

ನಕಲಿ ದಾಖಲೆ ಸೃಷ್ಟಿಸಿ ಬೈಕ್ ಮಾಲೀಕರ ಹೆಸರು ಬದಲಾವಣೆ ಮಾಡಿ ವಂಚಿಸಿದ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.

ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಸಂದರ್ಭದಲ್ಲಿ ಅದರ ಮಾಲೀಕ ಯಾರು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಆನಗೋಡು ಗ್ರಾಮದ ರೈತ ಎಚ್.ಎಸ್. ಸಿದ್ದಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, 2022ರ ಏ. 16ರಂದು ತಮ್ಮ ಮನೆಯಲ್ಲಿ 42 ಸಾವಿರ ರೂ.ಗಳ ಕಳ್ಳತನವಾಗಿತ್ತು.

ಪ್ರಕರಣ ಪತ್ತೆಯಾದ ನಂತರ 3400 ರೂ. ವಾಪಸ್ ಸಿಕ್ಕಿದೆ ಎಂದು ತಿಳಿಸಿದರು.

ಐಗೂರು ಗೊಲ್ಲರಹಟ್ಟಿಯ ತಿಪ್ಪೇಸ್ವಾಮಿ ಮಾತನಾಡಿ, 8-10 ಕ್ವಿಂಟಾಲ್ ಹಸಿ ಅಡಕೆ ಕಳ್ಳತನವಾಗಿತ್ತು, ಅದರಲ್ಲಿ 23 ಸಾವಿರ ರೂ. ವಾಪಸ್ ಬಂದಿದೆ.

ಇತ್ತೀಚೆಗೆ ಅಡಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಬಿಗಿಯಾದ ಕಾನೂನು ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.

ಜಗಳೂರಿನ ನವೀನಾ ಎಂಬ ಮಹಿಳೆ ಮಾತನಾಡಿ, ತಾವು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗಿದ್ದಾಗ 4.5 ಕೆಜಿ ಬೆಳ್ಳಿ, 25 ತೊಲ ಬಂಗಾರ ಕಳ್ಳತನವಾಗಿತ್ತು.

ಅದರಲ್ಲಿ 25 ತೊಲ ಚಿನ್ನ ವಾಪಸ್ ಸಿಕ್ಕಿದೆ. ನಮ್ಮ ನಿರ್ಲಕ್ಷೃದಿಂದ ಇಂಥ ಪ್ರಕರಣಗಳಿಗೆ ಆಸ್ಪದವಾಗುತ್ತದೆ. ಆದ್ದರಿಂದ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಕುಂಬಳೂರಿನ ಇಟಗಿ ಹನುಮಂತಪ್ಪ, ಹರಿಹರದ ಕೆ.ಟಿ. ರಾಮಚಂದ್ರಪ್ಪ ತಮ್ಮ ಸ್ವತ್ತು ವಾಪಸ್ ಸಿಕ್ಕಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು.

ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಿ.ಎಸ್. ಬಸವರಾಜ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಲಿಂಗನಗೌಡ ನೆಗಳೂರು, ದೇವಾನಂದ, ಶ್ರೀನಿವಾಸ್ ಇನ್ನಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net