

ಜಿ.ಕೆ.ಸುಗ್ಗರಾಜು ನೆಲಮಂಗಲ
ವಾರದಿಂದ ತಾಲೂಕಿನಾದ್ಯಂತ ಮಳೆ ಸುರಿದ ಪರಿಣಾಮ ತರಕಾರಿ ಬೆಳೆಗೆ ಹಾನಿಯಾಗಿದ್ದು, ತರಕಾರಿಗಳ ಬೆಲೆ ಗಗನಕ್ಕೇರಿದೆ. ಸಾಲು ಸಾಲು ಹಬ್ಬದ ಆಗಮದ ವೇಳೆಯಲ್ಲಿಯೇ ತರಕಾರಿ ದರ ಗಗನಮುಖಿಯಾಗಿರುವುದು ಗ್ರಾಹಕರನ್ನು ಕಂಗಾಲಾಗಿಸಿದೆ. ಇದು ವ್ಯಾಪಾರಿಗಳಿಗೂ ಬರೆ ಎಳೆಯುವಂತಾಗಿದೆ.
ನಗರ ಸೇರಿ ತಾಲೂಕಿನಾದ್ಯಂತ ಬಿಟ್ಟು ಬಿಡದೆ ಜಿಟಿ ಜಿಟಿ ಮಳೆಯಾಗುತ್ತಿದ್ದು ಹಲವು ಭಾಗದಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಮಾರುಕಟ್ಟೆಗಳತ್ತ ಗ್ರಾಹಕರ ಸುಳಿವೆ ಇಲ್ಲದಂತಾಗಿದೆ. ಇದರಿಂದ ವ್ಯಾಪಾರವಿಲ್ಲದೆ ಮಾರುಕಟ್ಟಗಳು ಬಣಗುಟ್ಟುತ್ತಿವೆ. ನಗರದ ಕೆಲವು ಪ್ರಮುಖ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಇನ್ನೂ ನೀರು ನಿಂತಿದ್ದು, ವಾಹನ ಸವಾರರು ಮಾರುಕಟ್ಟೆಗಳ ಬರಲೂ ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಗಳಿಗೆ ಬಂದಿಳಿದ ತರಕಾರಿಗಳನ್ನು ಕೇಳುವವವರಿಲ್ಲದಂತಾಗಿದೆ, ಇದು ವ್ಯಾಪಾರಿಗಳ ಸಂಕಷ್ಟವಾದರೆ ದುಬಾರಿ ಬೆಲೆಯ ತರಕಾರಿ ಖರೀದಿಗೆ ಗ್ರಾಹಕರೇ ಬೇಸ್ತು ಬೀಳುತ್ತಿದ್ದು ಮುಂದಿನ ಹಬ್ಬಗಳ ಸಂಭ್ರಮದ ಮೇಲೆ ಕಾರ್ಮೋಡ ಮುಸುಕಿದಂತಾಗಿದೆ.
ಮಳೆರಾಯ ಅಡ್ಡಿ: ದೀಪಾವಳಿ ಹಬ್ಬಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿ ಉಳಿದಿದೆ. ಇಂಥ ಸಂದರ್ಭದಲ್ಲಿ ಧಾರಾಕಾರ ಮಳೆಯಾಗುತ್ತಿರುವುದು ಜನರಲ್ಲಿ ಹಾಗೂ ವ್ಯಾಪಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಹಬ್ಬದ ಸಂದರ್ಭಗಳಲ್ಲಿ ತರಕಾರಿ ಹಾಗೂ ಹೂವು ಹೆಚ್ಚು ಮಾರಾಟವಾಗುತ್ತದೆ ಇದರಿಂದ ಒಂದಷ್ಟು ಲಾಭ ಕಾಣಬಹುದು ಎಂಬ ವ್ಯಾಪಾರಿಗಳ ನಿರೀಕ್ಷೆಗೆ ಮಳೆರಾಯ ಅಡ್ಡಿಯಾಗಿದ್ದಾನೆ.ನಿರಂತರ ಮಳೆಯ ಪ್ರಭಾವದಿಂದಾಗಿ ಹಲವು ತರಕಾರಿಗಳ ಬೆಲೆಯು ಗಗಮುಖಿಯಾಗಿದೆ. ಮಳೆಯಿಂದಾಗಿ ಬೆಳೆ ಹಾನಿ ಜತೆಗೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಾಸವಾಗಿದೆ. ಇದರಿಂದ ಬೇಡಿಕೆ ಹೆಚ್ಚಿದ್ದರೂ, ಪೂರೈಕೆ ಕಡಿಮೆಯಾಗಿದೆ. ತರಕಾರಿ ಪೂರೈಕೆ ಹಾಗೂ ಬೇಡಿಕೆ ನಡುವಿನ ವ್ಯತ್ಯಾಸದಿಂದಾಗಿ ಸಹಜವಾಗಿಯೇ ಬೆಲೆ ಏರಿಕೆಯಾಗಿದೆ. ಮಳೆಯಿಂದಾಗಿ ಈರುಳ್ಳಿ, ಟೊಮೆಟೊ ಹಾಗೂ ಆಲೂಗಡ್ಡೆ ಸೇರಿ ಅಗತ್ಯ ತರಕಾರಿ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಬೆಳ್ಳುಳ್ಳಿ ಹಾಗೂ ಶುಂಠಿ ಬೆಲೆ ಗಗನಚುಂಬಿಯಾಗಿದೆ,ಬೆಳ್ಳುಳ್ಳಿ ಬೆಲೆ ಕೆಜಿಗೆ 450 ರೂಪಾಯಿಯಿಂದ 600 ರೂಪಾಯಿಗೆ ಹೆಚ್ಚಳವಾಗಿದೆ. ಶುಂಠಿ ಬೆಲೆಯು 75ರಿಂದ 100 ರೂಪಾಯಿಗೆ ಏಕಾಏಕಿ ಹೆಚ್ಚಳವಾಗಿದೆ.
ವಿವಿಧ ತರಕಾರಿ ಬೆಲೆ: ಟಮೊಟೋ 60 ರೂ., ಬದನೆಕಾಯಿ 80 ರೂ., ಮೂಲಂಗಿ 80 ರೂ.,ಹಾಗಲಕಾಯಿ 60 ರೂ., ಹೀರೆಕಾಯಿ 60 ರೂ.,ಹುರುಳಿಕಾಯಿ 120 ರೂ., ಪಡವಲಕಾಯಿ 60ರೂ., ತೊಗರಿಕಾರಿ 80, ಸೋತೆಕಾಯಿ 40, ಸೋರೆಕಾಯಿ 50 ರೂ., ಮೆಣಸಿನಕಾಯಿ40 ರೂ., ಕ್ಯಾರೆಟ್ 60 ರೂ., ಬಟಾಣಿ 120 ರೂ.,ನುಗ್ಗೆಕಾಯಿ 120 ರೂ., ಬೆಂಡೆಕಾಯಿ 50 ರೂ., ಎಲೆಕೋಸು 30ರೂ., ಆಲೂಗಡ್ಡೆ30, ಕ್ಯಾಪಿಕಮ್ 80, ಗಡ್ಡೆಕೋಸು 30 ರೂ., ದಂಟಿನಸೊಪ್ಪು 20 ರೂ., ನಿಂಬೆಹಣ್ಣು 120, ಸಬ್ಬಕ್ಕಿ ಸೊಪ್ಪು 30ರೂಪಾಯಿ ಹೀಗೆ ಮಾರುಕಟ್ಟೆಯಲ್ಲಿ ವಿವಿಧ ಬೆಲೆಗೆ ಮಾರಾಟವಾಗುತ್ತಿವೆ.
ಮಳೆಯಿಂದ ಮಾರುಕಟ್ಟೆಗಳಿಗೆ ನಿಗದಿತ ಸಮಯಕ್ಕೆ ತರಕಾರಿ ಬರುತ್ತಿಲ್ಲ. ಇದರಿಂದ ಬೆಲೆಗಳಲ್ಲಿ ಹೆಚ್ಚಳವಾಗಿದೆ. ಪ್ರತಿನಿತ್ಯ ಮಾರುಕಟ್ಟೆಗೆಹೋಗಿ ತರಕಾರಿ ತೆಗೆದುಕೊಂಡು ಬರುತ್ತಿದ್ದೇವೆ.ಪೆಟ್ರೋಲ್, ಡೀಸೆಲ್ ಹೆಚ್ಚಾಗಿರುವುದರಿಂದ ಸಾಗಾಣಿಕೆ ವೆಚ್ಚವೂ ದುಬಾರಿಯಾಗಿದೆ.
ಕೃಷ್ಣಮೂರ್ತಿ, ತರಕಾರಿ ವ್ಯಾಪಾರಿ