ತರಕಾರಿ ಬಲು ದುಬಾರಿ

Vegitables and Grossery
Published on

ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ

ದಿನಸಿ ವಸ್ತುಗಳಾದ ಅಕ್ಕಿ, ತೊಗರಿಬೇಳೆ, ಉದ್ದಿನಬೇಳೆ, ಜೀರಗಿ, ಮತ್ತಿತರ ವಸ್ತುಗಳ ಬೆಲೆ ಸದ್ದಿಲ್ಲದೇ ಶೇ. 15ರಿಂದ 20ರಷ್ಟು ಹೆಚ್ಚಳವಾಗಿವೆ. ಇದರ ಜತೆಗೆ ಟೊಮ್ಯಾಟೊ ಬೆಲೆ ಪ್ರತಿ ಕೆಜಿ 100 ರೂಪಾಯಿಯಾಗಿದೆ.

ಮಾರುಕಟ್ಟೆಯಲ್ಲಿ ದಿನಸಿ ಮತ್ತು ತರಕಾರಿ ದರ ಹೆಚ್ಚಾಗಲು ಮಳೆ ಆಗದಿರುವುದೇ ಪ್ರಮುಖ ಕಾರಣವಾಗಿದೆ. ಅಲ್ಲದೆ, ಅಗತ್ಯ ವಸ್ತುಗಳ ಕೊರತೆ ಕಂಡು ಬಂದಾಗ ಎಂಎನ್​ಸಿ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಸ್ಟಾಕ್ ಮಾಡಿಕೊಳ್ಳಲು ಮುಂದಾಗುತ್ತವೆ.

ಆಗ ಒಂದು ರೀತಿಯಲ್ಲಿ ಕೃತಕ ಅಭಾವ ವಾತಾವರಣ ಸೃಷ್ಟಿಯಾಗುತ್ತದೆ. ನಂತರದ ದಿನಗಳಲ್ಲಿ ದೊಡ್ಡ ವ್ಯಾಪಾರಸ್ಥರು ಮತ್ತು ಎಂಎನ್​ಸಿ ಕಂಪನಿಗಳು ಸ್ಟಾಕ್ ಮಾಡಿಕೊಂಡಿದ್ದ ದಿನಸಿ ವಸ್ತುಗಳನ್ನು ಕೊಂಚ ಹೆಚ್ಚಿನ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ ಎನ್ನುತ್ತಾರೆ ಎಪಿಎಂಸಿಯ ಪ್ರಮುಖ ವ್ಯಾಪಾರಸ್ಥರೊಬ್ಬರು.

ಈಗ ಮೊದಲೇ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿದ್ದರಿಂದ ಜನರು ಹೈರಾಣಾಗಿದ್ದಾರೆ. ಮತ್ತೆ ದಿನಸಿ ಬೆಲೆ ಹೆಚ್ಚಳ ಸರದಿ. ಇದೆಲ್ಲದರ ಪರಿಣಾಮ ಮಧ್ಯಮ ವರ್ಗದ ಜನರಿಗೆ ಆಗುತ್ತದೆ. ಶ್ರೀಮಂತ ವರ್ಗದವರಿಗೆ ಅಷ್ಟೇನು ಪರಿಣಾಮ ಬೀರುವುದಿಲ್ಲ. ಮುಂದೇನು ಎಂಬುದೇ ಸಾರ್ವಜನಿಕರ ಪ್ರಶ್ನೆಯಾಗಿದೆ.

ಮುಂಬರುವ ದಿನಗಳಲ್ಲಿ ತೊಗರಿಬೇಳೆ ಬೆಲೆ ಕೆಜಿಗೆ 200 ರೂಪಾಯಿ ದಾಟಿದರೂ ಆಶ್ಚರ್ಯವಿಲ್ಲ. ಏಕೆಂದರೆ ಈಗಾಗಲೇ ಎಂಎನ್​ಸಿ ಕಂಪನಿಗಳು ತೊಗರಿಬೇಳೆ, ಉದ್ದಿನಬೇಳೆ ಸಂಗ್ರಹಕ್ಕೆ ಮುಂದಾಗಿವೆ. ಇದಕ್ಕೆ ಸರ್ಕಾರಗಳು ಕಡಿವಾಣ ಹಾಕಬೇಕು. ಒಂದು ದೇಶ, ಒಂದು ಕಾಯ್ದೆ ಮಾದರಿಯಲ್ಲಿ ಸಣ್ಣ ಮತ್ತು ದೊಡ್ಡ ವ್ಯಾಪಾರಸ್ಥರಿಗೆ ಒಂದೇ ಕಾಯ್ದೆ ಅನುಷ್ಠಾನಗೊಳಿಸಬೇಕು. ಸಣ್ಣ ವ್ಯಾಪಾರಸ್ಥರು ನಿಗದಿಗಿಂತ ಹೆಚ್ಚು ಬೇಳೆ ಕಾಳುಗಳನ್ನು ಸ್ಟಾಕ್ ಮಾಡಿಕೊಳ್ಳುವಂತಿಲ್ಲ. ಆದರೆ, ಎಂಎನ್​ಸಿ ಕಂಪನಿಗಳಿಗೆ ಇದಕ್ಕೆ ನಿರ್ಬಂಧವಿಲ್ಲ. ಈ ಪದ್ಧತಿ ಬದಲಾವಣೆಯಾಗಬೇಕು. ಅಂದಾಗ ಮಾತ್ರ ಬೆಲೆ ನಿಯಂತ್ರಣದಲ್ಲಿರಲು ಸಾಧ್ಯ.| ಚನ್ನು ಹೊಸಮನಿಎಪಿಎಂಸಿ ಮಾಜಿ ಸದಸ್ಯ

ಮಳೆ ಆಗದಿರುವುದು ಮತ್ತು ಎಲ್ಲ ನದಿಗಳಲ್ಲಿ ನೀರು ಖಾಲಿಯಾಗಿದೆ. ಇದರ ಜತೆಗೆ ಬೋರ್​ವೆಲ್​ಗಳಲ್ಲಿ ನೀರು ಕಡಿಮೆಯಾಗಿದೆ. ಇವೆಲ್ಲ ಕಾರಣದಿಂದಾಗಿ ತರಕಾರಿ ಬೆಳೆಯುವುದು ಕಡಿಮೆಯಾಗಿದೆ. ಇವೆಲ್ಲ ಕಾರಣದಿಂದ ಟೊಮ್ಯಾಟೊ, ಮೆಣಸಿನಕಾಯಿ, ಬೆಂಡಿಕಾಯಿ, ಹಿರೇಕಾಯಿ ಮತ್ತಿತರ ತರಕಾರಿ ಬೆಲೆ ಹೆಚ್ಚಳವಾಗಿವೆ.| ಶ್ರೀಕಾಂತ ಸಿದ್ದಾಪುರತರಕಾರಿ ವ್ಯಾಪಾರಸ್ಥ ಸಿದ್ಧೇಶ್ವರ ಪಾರ್ಕ್ ಹುಬ್ಬಳ್ಳಿ

  • ಅಕ್ಕಿ (ಜೀರಾ) ಈಗಿನ ಬೆಲೆ ಪ್ರತಿ ಕೆಜಿಗೆ 65, ಕಳೆದ ವಾರದ ಬೆಲೆ 60
  • ತೊಗರಿಬೇಳೆ ಈಗಿನ ಬೆಲೆ ಪ್ರತಿ ಕೆಜಿಗೆ 150, ಕಳೆದ ವಾರದ ಬೆಲೆ 130
  • ಹೆಸರು ಬೇಳೆ ಈಗಿನ ಬೆಲೆ ಪ್ರತಿ ಕೆಜಿಗೆ 112, ಕಳೆದ ವಾರದ ಬೆಲೆ 104
  • ಉದ್ದಿನಬೇಳೆ ಈಗಿನ ಬೆಲೆ ಪ್ರತಿ ಕೆಜಿಗೆ 130, ಕಳೆದ ವಾರದ ಬೆಲೆ 115
  • ಅವಲಕ್ಕಿ ಈಗಿನ ಬೆಲೆ ಪ್ರತಿ ಕೆಜಿಗೆ 48, ಕಳೆದ ವಾರದ ಬೆಲೆ 40
  • ಗುರೆಳ್ಳ ಈಗಿನ ಬೆಲೆ ಪ್ರತಿ ಕೆಜಿಗೆ 145, ಕಳೆದ ವಾರದ ಬೆಲೆ 120
  • ಜೀರಗಿ ಈಗಿನ ಬೆಲೆ ಪ್ರತಿ ಕೆಜಿಗೆ 720, ಕಳೆದ ವಾರದ ಬೆಲೆ 450
  • ಲವಂಗ ಈಗಿನ ಬೆಲೆ ಪ್ರತಿ ಕೆಜಿಗೆ 1,000, ಕಳೆದ ವಾರದ ಬೆಲೆ 850
  • ಸಾಬುದಾನಿ ಈಗಿನ ಬೆಲೆ ಪ್ರತಿ ಕೆಜಿಗೆ 76, ಕಳೆದ ವಾರದ ಬೆಲೆ 60
  • ಶೇಂಗಾ ಈಗಿನ ಬೆಲೆ ಪ್ರತಿ ಕೆಜಿಗೆ 130, ಕಳೆದ ವಾರದ ಬೆಲೆ 115
  • ಜೋಳ ಈಗಿನ ಬೆಲೆ ಪ್ರತಿ ಕೆಜಿಗೆ 60, ಕಳೆದ ವಾರದ ಬೆಲೆ 50
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net