

ರಾಣೆಬೆನ್ನೂರ: ಈ ಬಾರಿ ಮುಂಗಾರು ಮಳೆ ಇನ್ನೂ ಆರಂಭಗೊಂಡಿಲ್ಲ. ಬಿಸಿಲು ನಿತ್ಯವೂ ಚುರುಗುಟ್ಟುತ್ತಲೇ ಇದೆ. ಇಂಥ ಸಮಯದಲ್ಲಿ ತರಕಾರಿ ಬೆಲೆಯೂ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ.
ಪ್ರತಿಯೊಂದು ತರಕಾರಿಯೂ ಕೆ.ಜಿ.ಗೆ 50 ರೂಪಾಯಿಗೂ ಅಧಿಕ ದರವಿದೆ. ಇದರಿಂದ ಬಡವರು ತರಕಾರಿ ಖರೀದಿಸಲು ಯೋಚಿಸುವ ಪರಿಸ್ಥಿತಿ ಎದುರಾಗಿದೆ. ನಗರದ ಮೇಡ್ಲೇರಿ ರಸ್ತೆ, ವಿನಾಯಕ ನಗರ, ಹಲಗೇರಿ ರಸ್ತೆ, ಹಳೇ ಪಿ.ಬಿ. ರಸ್ತೆ, ಕುರುಬಗೇರಿ ಕ್ರಾಸ್, ಗುತ್ತಲ ರಸ್ತೆ ಮತ್ತಿತರೆಡೆ ತರಕಾರಿ ಮಾರಾಟ ಮಾಡಲಾಗುತ್ತದೆ.
ಬೀನ್ಸ್ 120 ರೂಪಾಯಿಗೆ 1 ಕೆ.ಜಿ., ಟೊಮ್ಯಾಟೊ 40 ರೂಪಾಯಿ, ಬದನೆಕಾಯಿ 60 ರೂಪಾಯಿ, ಹಸಿಮೆಣಸಿನಕಾಯಿ 60 ರೂಪಾಯಿ, ಉಳ್ಳಾಗಡ್ಡಿ 30 ರೂಪಾಯಿ, ಆಲೂಗಡ್ಡಿ 50 ರೂಪಾಯಿ, ಹಿರೇಕಾಯಿ 70 ರೂಪಾಯಿ, ಬೀಟ್‌ರೂಟ್ 60 ರೂಪಾಯಿ, ಚೌಳೆಕಾಯಿ 50 ರೂಪಾಯಿಗೆ ಕೆ.ಜಿ.ಯಂತೆ ಮಾರಾಟವಾಗುತ್ತಿದೆ. ಆದರೆ, ಈಗಾಗಲೇ ಮಳೆ ಆರಂಭವಾಗಿದ್ದರೆ ಬೆಲೆ ಅರ್ಧದಷ್ಟು ಕಡಿಮೆಯಾಗಿರುತ್ತಿತ್ತು. ಈಗ ಗ್ರಾಹಕರಿಗೆ ತರಕಾರಿ ಬೆಲೆಯೇ ಹೊರೆಯಾಗುತ್ತಿದೆ.
ಬೇಸಿಗೆ ಸಮಯದಲ್ಲಿ ನೀರಾವರಿ ಮಾಡಿಕೊಂಡು ರೈತರು ಹಗಲೂರಾತ್ರಿ ಎನ್ನದೆ ಮೂರ‌್ನಾಲ್ಕು ಬಗೆಯ ತರಕಾರಿ ಬೆಳೆದು ಮಾರುಕಟ್ಟೆಗೆ ತರುತ್ತಾರೆ. ದುಬಾರಿ ಬೆಲೆಯ ರಾಸಾಯನಿಕ, ಔಷಧ ಸಿಂಪಡಿಸಿ, ಕಾರ್ಮಿಕರಿಗೆ ಸಾವಿರಾರು ರೂ. ಕೊಟ್ಟು ಬೆಳೆ ಕಾಪಾಡಿಕೊಳ್ಳಬೇಕು. ಇಷ್ಟೆಲ್ಲ ಖರ್ಚು ಮಾಡಿ ತರಕಾರಿಯನ್ನು ಎಪಿಎಂಸಿ ಮಾರುಕಟ್ಟೆಗೆ ತಂದರೆ ಖರೀದಿದಾರರು ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಆದರೆ, ಗ್ರಾಹಕರಿಗೆ ಬೇಸಿಗೆ ಹೆಸರು ಹೇಳಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಲಾಭ ಅಷ್ಟಕಷ್ಟೇ ಎನ್ನುವಂತಾಗಿದೆ.
ಕೆಲವೊಂದು ಬಾರಿ ಎಪಿಎಂಸಿಯಲ್ಲಿನ ದರದಿಂದ ರೈತರಿಗೆ ಕೂಲಿ ವೆಚ್ಚವೂ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಅನ್ನದಾತರು ಹೆಚ್ಚಿನ ನಷ್ಟ ಅನುಭವಿಸುವ ಸ್ಥಿತಿ ಬಂದಿರುತ್ತದೆ. ರೈತರು ನಸುಕಿನಲ್ಲಿ ಮಾರುಕಟ್ಟೆಗೆ ತಂದು ಮಾರಾಟ ಮಾಡುವುದು ಮಾತ್ರ ಗೊತ್ತು. ಆದರೆ, ಅವರೇ ಮಾರುಕಟ್ಟೆಯಲ್ಲಿ ಬಂಡಿಯನ್ನಿಟ್ಟು ದಿನಪೂರ್ತಿ ನಿಂತು ಮಾರಾಟ ಮಾಡುವುದು ಕಷ್ಟದ ಕೆಲಸ. ಇದೊಂದನ್ನೇ ಅವಲಂಬಿಸಿದರೆ ಉಳಿದೆಲ್ಲ ಕೃಷಿ ಕೆಲಸಕ್ಕೂ ತೊಂದರೆಯಾಗಲಿದೆ ಎಂಬುದು ಅನ್ನದಾತರ ಅಳಲು.
ಬೇಸಿಗೆ ಕಾಲ ಆಗಿದ್ದರಿಂದ ತರಕಾರಿ ಬೆಳೆಯಲು ಬಹಳಷ್ಟು ಕಷ್ಟ ಪಡಬೇಕು. ಮಳೆ ಇಲ್ಲದ ಸಮಯದಲ್ಲಿ ನೀರು ಹಾಯಿಸುವುದು ಬಲು ಸವಾಲಿನ ಕೆಲಸವಾಗಿರುತ್ತದೆ. ಆದರೂ ಮಾರುಕಟ್ಟೆಯಲ್ಲಿ ಚಿಲ್ಲರೆ ತರಕಾರಿ ಬೆಲೆ ಏರಿಕೆಯಾಗಿದೆ. ನಮಗೆ ಮೊದಲು ದೊರೆತ ಬೆಲೆಯೇ ಈಗಲೂ ದೊರೆಯುತ್ತ್ತಿದೆ.ಸಿದ್ದೇಶ ಡೊಳ್ಳಿನ, ತರಕಾರಿ ಬೆಳೆದ ರೈತ ಯಾವ ತರಕಾರಿ ತೆಗೆದುಕೊಂಡರೂ 20 ರೂ.ಗೆ ಕಾಲು ಕೆ.ಜಿ. ಎಂದು ಹೇಳುತ್ತಾರೆ. ಬೀನ್ಸ್‌ನಂತಹ ತರಕಾರಿ ಕೇಳಿದರೆ 40 ರೂ.ಗೆ ಕಾಲು ಕೆ.ಜಿ.ದರವಿದೆ. ಏಕೆ ಎಂದು ಕೇಳಿದರೆ ಬೇಸಿಗೆಯಿಂದ ತರಕಾರಿ ಬೆಲೆ ಏರಿಕೆಯಾಗಿದೆ ಎನ್ನುವ ಉತ್ತರ ವ್ಯಾಪಾರಸ್ಥರಿಂದ ಸಿಗುತ್ತಿದೆ. ಆದರೂ ಅನಿವಾರ್ಯವಾಗಿ ಅವರು ಹೇಳಿದ ಬೆಲೆ ಕೊಟ್ಟು ತರಕಾರಿ ಖರೀದಿಸುತ್ತಿದ್ದೇವೆ.ಮಂಜುನಾಥ ಆನೂರ, ಸ್ಥಳೀಯ ನಿವಾಸಿ