

ಹುಬ್ಬಳ್ಳಿ: ಜನತಾ ಬಜಾರ್ ಮಾರುಕಟ್ಟೆ ಪ್ರದೇಶದಿಂದ ಸ್ಥಳಾಂತರಗೊಂಡ ತರಕಾರಿ, ಹೂವು-ಹಣ್ಣು ವ್ಯಾಪಾರಿಗಳು ಪಾಲಿಕೆ ಸೂಚಿಸಿದ ಪರ್ಯಾಯ ಸ್ಥಳದಲ್ಲಿ ಶುಕ್ರವಾರವು ವ್ಯಾಪಾರ-ವಹಿವಾಟು ನಡೆಸಲಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಯ 18.36 ಕೋ. ರೂ. ಅನುದಾನದಲ್ಲಿ ಜನತಾ ಬಜಾರ್ನಲ್ಲಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ವಿುಸಲಾಗುತ್ತಿದೆ. ಈ ಸಂಬಂಧ ಅಲ್ಲಿ ಇದ್ದ ವ್ಯಾಪಾರಿಗಳ ಸ್ಥಳಾಂತರ ಪ್ರಕ್ರಿಯೆ ಬುಧವಾರದಿಂದ ಆರಂಭಗೊಂಡಿದೆ. ಜನತಾ ಬಜಾರ್ ಮಾರುಕಟ್ಟೆ ಪ್ರದೇಶ ಸಂಪೂರ್ಣ ಖಾಲಿಯಾಗಿದೆ.
ಗೋಕುಲ ರಸ್ತೆ ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕದ ಜಾಗದಲ್ಲಿ ಶನಿವಾರದಿಂದ ವ್ಯಾಪಾರ-ವಹಿವಾಟು ನಡೆಸುವುದಾಗಿ ತರಕಾರಿ ಮಾರಾಟಗಾರರು ಪಾಲಿಕೆಗೆ ತಿಳಿಸಿದ್ದಾರೆ. ಬಹಳಷ್ಟು ಜನ ತರಕಾರಿ, ಹೂವು-ಹಣ್ಣು ಮಾರಾಟಗಾರರು ಕೇಶ್ವಾಪುರ ಸಂತೆಯಲ್ಲಿ ಇದ್ದರು. ಹಾಗಾಗಿ ಕೇಶ್ವಾಪುರ ಸಂತೆ ಇಂದು ಸಾಕಷ್ಟು ವಿಸ್ತಾರಗೊಂಡಿತ್ತು.
ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕದ ಜಾಗದಲ್ಲಿ ಪ್ರತಿ ಮಾರಾಟಗಾರರಿಗೆ ಹಂಚಿಕೆ ಮಾಡಿರುವ ಸ್ಥಳ ಕಡಿಮೆಯಿದೆ. ಹೆಚ್ಚಿಗೆ ಮಾಡಬೇಕು ಎಂದು ಪಾಲಿಕೆಗೆ ತರಕಾರಿ ಮಾರಾಟಗಾರರು ಮನವಿ ಮಾಡಿದರು. ‘ಕ್ಲಾರ್ಕ್ಸ್ ಇನ್ ಹೋಟೆಲ್ ಪಕ್ಕ ಪ್ರತಿಯೊಬ್ಬ ತರಕಾರಿ ಮಾರಾಟಗಾರರಿಗೆ 4 ಅಡಿ ಉದ್ದ ಹಾಗೂ 4 ಅಡಿ ಅಗಲದ ಜಾಗ ಗುರುತು ಹಾಕಿಕೊಟ್ಟಿದ್ದೇವೆ. ನಿಯಮಾವಳಿ ಪ್ರಕಾರ ಹೆಚ್ಚಿಗೆ ನೀಡಿದ್ದೇವೆ. ಒಟ್ಟು 156 ಮಾರಾಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಪಿ.ಬಿ. ರಸ್ತೆ ಬಾಸೆಲ್ ಮಿಷನ್ ಸ್ಕೂಲ್ ಬಳಿ ಹಿಂಭಾಗ ಪಾಲಿಕೆ ಒಡೆತನದ ಮೂರುವರೆ ಗುಂಟೆ ಜಾಗ ಇದೆ. ಅಲ್ಲಿ 30 ಜನರಿಗೆ ಸ್ಥಳಾವಕಾಶ ಕಲ್ಪಿಸಲು ಮಾರ್ಕಿಂಗ್ ಮಾಡಲಾಗಿದೆ’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ. ಹೊಸೂರಿಗೆ ಸ್ಥಳಾಂತರಗೊಂಡ ಮಳಿಗೆದಾರರ ಪೈಕಿ 41 ಜನ ಮಳಿಗೆ ತೆರೆದು ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ. ಇಲ್ಲಿ 51 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ.