ಅಂಕೋಲಾ: ಮಧ್ಯರಾತ್ರಿ ತಂಡವೊಂದು ತರಕಾರಿ ಅಂಗಡಿಯನ್ನು ಧ್ವಂಸಗೊಳಿಸಿ ಸಾಮಗ್ರಿಗಳನ್ನು ಬೀದಿಗೆಸೆದಿದ್ದಲ್ಲದೆ, ರಸ್ತೆಯ ಮೇಲೆ ಕಲ್ಲು ಸುರಿದು ವಾಹನ ಸಂಚಾರ ಬಂದ್ ಮಾಡಿದ ಘಟನೆ ಅಂಬಾರಕೊಡ್ಲ ರಸ್ತೆಯಲ್ಲಿ ನಡೆದಿದೆ. ಘಟನೆ ಕುರಿತು ತರಕಾರಿ ಅಂಗಡಿ ವ್ಯಾಪಾರಿ ಇಲಿಯಾಸ್ ಎಂಬುವವರು ಇಬ್ಬರ ವಿರುದ್ಧ ದೂರು ಸಲ್ಲಿಸಿದ್ದಾನೆ.
ಕಾಕರಮಠದ ನವಾಜ್ ಏ ಶೇಖ ಹಾಗೂ ಇಬ್ರಾಹಿಂ ಎಂ ಶೇಖ ವಿರುದ್ಧ ದೂರು ದಾಖಲಿಸಲಾಗಿದೆ. ಇಲಿಯಾಸ್ 50 ವರ್ಷಗಳಿಂದ ತರಕಾರಿ ವ್ಯಾಪಾರ ಮಾಡುತ್ತಿದ್ದು, ಜಾಗದ ಮೂಲ ಮಾಲೀಕ ಮರಣ ಹೊಂದಿದ ನಂತರ ಅಂಗಡಿ ಮಾಲೀಕತ್ವ ಹಾಗೂ ಕಬ್ಜಾ ಬಗ್ಗೆ ಅಂಕೋಲಾ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ. ಗಲಾಟೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡು ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದ್ದಾರೆ. ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು ತಪ್ಪಿತಸ್ಥರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.