ತರಕಾರಿ ಬೆಲೆ ಬಹುತೇಕ ಸ್ಥಿರ: ಶುಂಠಿ, ಬೆಳ್ಳುಳ್ಳಿ ತುಟ್ಟಿ ಹೂವಿನ ದರವೂ ಇಳಿಕೆ

Panoramic food background with assortment of fresh organic vegetables
ತರಕಾರಿ ದುಬಾರಿ
Published on

ಮೈಸೂರು: ಮಾರುಕಟ್ಟೆಯಲ್ಲಿ ಈ ವಾರ ಟೊಮ್ಯಾಟೊ ಸೇರಿದಂತೆ ಬಹುತೇಕ ತರಕಾರಿಗಳ ಬೆಲೆ ಸ್ಥಿರವಾಗಿದ್ದು, ಶುಂಠಿ, ಬೆಳ್ಳುಳ್ಳಿ ಬೆಲೆ ಗ್ರಾಹಕರಿಗೆ ದುಬಾರಿಯಾಗಿವೆ.

ಶುಂಠಿ, ಬೆಳ್ಳುಳ್ಳಿ ಕೆ.ಜಿ.ಗೆ 200 ರೂ.ಗೆ ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ದುಬಾರಿ ಎನಿಸಿದೆ. ಕಳೆದ ಕೆಲವು ವಾರಗಳಿಂದ ಏರು ಮುಖವಾಗಿದ್ದ ಟೊಮ್ಯಾಟೊ ಬೆಲೆ ಅದೇ ಸ್ಥಿತಿಯಲ್ಲಿದ್ದು, ಇಳಿಕೆಯ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ತಿಂಗಳ ಆರಂಭದಲ್ಲಿ 15 ರೂ.ಗೆ ಮಾರಾಟವಾಗುತ್ತಿದ್ದ ಟೊಮ್ಯಾಟೊ ಸದ್ಯ 40 ರೂ.ಗೆ ಮಾರಾಟವಾಗುತ್ತಿದೆ. ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಬೆಳೆ ಹಾನಿಯಾಗಿರುವುದೂ ಬೆಲೆ ಏರಿಕೆಗೆ ಕಾರಣ. ಬೇಡಿಕೆ ಹೆಚ್ಚಿರುವ ಕಾರಣ ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಬಹುದು ಎನ್ನುತ್ತಾರೆ ವ್ಯಾಪಾರಿಗಳು.

ನಗರದ ಮಾರುಕಟ್ಟೆಯಲ್ಲಿ ಕೆ.ಜಿ. ಈರುಳ್ಳಿ 40 ರೂ., ಆಲೂಗೆಡ್ಡೆ 40 ರೂ.ಗೆ ಮಾರಾಟವಾಗುತ್ತಿತ್ತು. ಮಳೆಗಾಲದ ಹಿನ್ನೆಲೆಯಲ್ಲಿ ಸೌತೆ ಹಾಗೂ ನಿಂಬೆಗೆ ಬೇಡಿಕೆ ಕುಸಿದಿದ್ದು, ಬೆಲೆ ಸಹ ಇಳಿಕೆ ಯಾಗಿದೆ. ಸೌತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 20 ರೂ. ಹಾಗೂ ಒಂದು ನಿಂಬೆ 5 ರೂ.ಗೆ ಮಾರಾಟ ವಾಗುತ್ತಿದೆ. ಹಸಿ ಮೆಣಸಿನಕಾಯಿ ಕೆ.ಜಿ. 100 ರೂ.ಗೆ ಏರಿಕೆ ಕಂಡಿದೆ.

ಕುಸಿದ ಹೂವಿನ ದರ: ಕಳೆದ ತಿಂಗಳು ದುಬಾರಿಯಾಗಿದ್ದ ಸೇವಂತಿ ಮೀಟರ್‌ಗೆ 100 ರೂ.ರಂತೆ ವ್ಯಾಪಾರವಾಗುತ್ತಿತ್ತು. ಮಲ್ಲಿಗೆ, ಕಣಗಿಲೆ ಹೂ, ಮರಬಾಳೆ, ಕಾಕಡ ಕೆ.ಜಿ.40 ರೂ.ಗೆ ಗ್ರಾಹಕರ ಕೈ ಸೇರುತ್ತಿದೆ. ಇತರೆ ಹೂಗಳ ದರವೂ ಕುಸಿತವಾಗಿದೆ.
ಶುಭ ಸಮಾರಂಭಗಳು ಇಲ್ಲದೇ ಇರುವುದರಿಂದ ಉಳಿದ ಹೂಗಳೂ ಬೇಡಿಕೆ ಕಳೆದುಕೊಂಡಿವೆ. ಆಷಾಢ ಶುಕ್ರವಾರವನ್ನು ನಗರದಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ಹೀಗಾಗಿ ಹೂವಿಗೆ ಬೇಡಿಕೆ ಹೆಚ್ಚಲಿದ್ದು, ದರವೂ ಏರಿಕೆಯಾಗಲಿದೆ. ಆಷಾಢ ಮುಗಿಯುವವರೆಗೂ ದರದ ಹಾವು ಏಣಿ ಆಟ ಮುಂದುವರಿಯಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net