ಬೆಲೆ ಕುಸಿತದಿಂದ ಪುಕ್ಕಟ್ಟೆ ಕೊಟ್ಟರೂ ಕೊಳ್ಳುವವರಿಲ್ಲ

web 3
Published on

ಚಿಕ್ಕಮಗಳೂರು: ಗುಳ್ಳಾಬದನೆ ಬೆಲೆ ಕುಸಿತದಿಂದ ಪುಕ್ಕಟ್ಟೆ ಕೊಟ್ಟರೂ ಕೊಳ್ಳುವವರಿಲ್ಲದೆ ರೈತರು ಬೀದಿಗೆ ಚೆಲ್ಲುತ್ತಿದ್ದಾರೆ. ಹೊಲ ಹಸನು ಮಾಡಿ, ಬೀಜ ಬಿತ್ತಿ, ಔಷಧೋಪಚಾರ ಮಾಡಿ ಮೂರು ತಿಂಗಳು ರೈತರು ಬೆವರು ಸುರಿಸುತ್ತಾರೆ. ಉತ್ತಮ ಫಸಲು ಬಂದರೂ ಬೆಲೆ ಸಿಗದೆ ತರಕಾರಿಯನ್ನು ಬೀದಿಗೆ ಚೆಲ್ಲುವಾಗ ಆಗುವ ಸಂಕಟ ಅನ್ನದಾತನಿಗೆ ಮಾತ್ರ ಗೊತ್ತು. ರಸ್ತೆ ಬದಿ ಎಸೆದುಹೋಗುವ ಬದನೆಯನ್ನು ಬಡವರು ತೆಗೆದುಕೊಂಡು ಹೋಗುತ್ತಿದ್ದಾರೆ.

ಬಂಡಿಹಳ್ಳಿ ಸುತ್ತಮುತ್ತಲ ಹಲವು ತರಕಾರಿ ಬೆಳೆದ ರೈತರಿಗೆ ಈ ಪರಿಸ್ಥಿತಿ ಬಂದೊದಗಿದೆ. ಕರೊನಾದಿಂದ ಹೊರ ರಾಜ್ಯಗಳಿಗೆ ತರಕಾರಿ ಸಾಗಣೆ ಆಗದಿರುವುದು ಮತ್ತು ಉತ್ತಮ ಫಸಲು ಬಂದರೂ ಮಧ್ಯವರ್ತಿಗಳ ಹಾವಳಿಯಿಂದ ಬೆಲೆ ಸಿಗದಿರಲು ಕಾರಣ ಎಂಬುದು ರೈತರ ಅಸಮಾಧಾನ.

ಬೀಟ್ರೂಟ್ 55ರಿಂದ 65 ಕೆ.ಜಿ ಚೀಲಕ್ಕೆ 200, ಬೀನ್ಸ್ ಕೆ.ಜಿಗೆ 4ರಿಂದ 5 ರೂ. ಇದೆ. ಬದನೆಯನ್ನು ಬಿಡಿಗಾಸಿಗೂ ಕೇಳುವವರಿಲ್ಲದೆ ಮರ್ಲೆಗೆ ಸಾಗುವ ರಸ್ತೆ ಬದಿ ಚೆಲ್ಲಿದ್ದಾರೆ. ಹೊಲದಲ್ಲಿ ಕೆಲಸ ಮಾಡುವ ಕಾರ್ವಿುಕರು ಅದನ್ನು ಆಯ್ದುಕೊಂಡು ಹೋಗುತ್ತಿದ್ದಾರೆ. ಇದೇ ರಸ್ತೆಯಲ್ಲಿ ಲತಾ ಎಂಬುವವರು ಒಂದು ಎಕರೆಯಲ್ಲಿ ಬೆಳೆದಿದ್ದ ಬದನೆ ಕಟಾವು ಮಾಡದೆ ಹೊಲದಲ್ಲೇ ಬಿಟ್ಟಿದ್ದಾರೆ. ಪಕ್ಕದಲ್ಲಿ ಒಂದು ಎಕರೆ ಬೀನ್ಸ್ ಹಾಕಿದ್ದು ಕೆ.ಜಿಗೆ 5 ರೂ.ಗೆ ಕೇಳುತ್ತಿದ್ದಾರೆ. ಲೋಕೇಶ್, ಪುಟ್ಟಸ್ವಾಮಿ ಸೇರಿ ಹಲವರು ಗದ್ದೆಯಲ್ಲಿ ಬಿಡುವ ಬದಲು ಅಕ್ಕಪಕ್ಕದವರಿಗೆ ಕೊಡಬಹುದು ಎಂದು ಕಟಾವು ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net