

ಪ್ರಕಾಶ್ ಮಂಜೇಶ್ವರ ಮಂಗಳೂರು
ಕೊಯ್ಯಲು ಬಂದಿರುವ ಬಸಳೆ, ಅಲಸಂಡೆ, ಕುಂಬಳ ಕಾಯಿ, ಬೆಂಡೆಕಾಯಿ, ಬದನೆ ಮತ್ತಿತರ ತರಕಾರಿಗಳನ್ನು ಎಲ್ಲಿಗಪ್ಪಾ ಮಾರೋದು? ಈಗ ತಾಜಾ ತರಕಾರಿ ಎಲ್ಲಿಂದ ತರೋದು? ಎಂಬ ಪ್ರಶ್ನೆಗಳಿಗೆ ಲಾಕ್‌ಡೌನ್ ಸಂದರ್ಭ ಕಾಸರಗೋಡು ಜಿಲ್ಲೆಯ ಮಂಜೇಶರ ತಾಲೂಕಿನ ಕೃಷಿಕರ ಸಣ್ಣ ಗುಂಪು ಉತ್ತರ ಕಂಡುಕೊಂಡಿದೆ.
ಮೀಂಜ ಗ್ರಾಮ ಪಂಚಾಯಿತಿಯ ದೇರಂಬಳದ ಹರೀಶ್ ಮತ್ತು ಶ್ರೀಧರ ಶೆಟ್ಟಿ ಬೈದಡ್ಕ ಈಗ ತಮ್ಮ ತೋಟದಲ್ಲಿ ಬೆಳೆದ ತರಕಾರಿಯನ್ನು ಮಾರಾಟ ಮಾಡಲು ನಗರಗಳಿಗೆ ಅಲೆಯಬೇಕಾಗಿಲ್ಲ. ಲಭ್ಯ ತರಕಾರಿ ಬಗ್ಗೆ ವಾಟ್ಸಾಪ್ ಗ್ರೂಪ್ ಮೂಲಕ ಖಚಿತ ಮಾಹಿತಿ ಪಡೆದುಕೊಂಡು ಗ್ರಾಹಕರೇ ಕೃಷಿಕರ ಮನೆ ಬಾಗಿಲಿಗೆ ಬಂದು ತಮಗೆ ಹಾಗೂ ತಮ್ಮ ಆಸುಪಾಸಿನ ಕುಟುಂಬಗಳಿಗೆ ಬೇಕಾದ ತರಕಾರಿ ಕೊಂಡೊಯ್ಯುತ್ತಾರೆ.
ಹೊಸ ವ್ಯವಸ್ಥೆಯಿಂದ ಕೃಷಿಕರು ಲಾಕ್‌ಡೌನ್ ಸಂದರ್ಭ ಮಾರುಕಟ್ಟೆಗೆ ತರಕಾರಿ ತಲುಪಿಸುವ ಸಂಕಷ್ಟ ಮತ್ತು ಬೆಲೆಯ ಅನಿಶ್ಚಿತತೆಯಿಂದ ಪಾರಾಗಿದ್ದಾರೆ. ಮಧ್ಯವರ್ತಿಗಳ ಹಂಗಿಲ್ಲದೆ ಮಾರಾಟವಾಗುತ್ತಿರುವ ಕಾರಣ ಗ್ರಾಹಕರಿಗೂ ಉತ್ತಮ ಬೆಲೆಗೆ ತಾಜಾ ತರಕಾರಿ ಸುಲಭ ಸಾಧ್ಯವಾಗಿದೆ.
ಆಲೋಚನೆ ಮೊಳೆತದ್ದು ಹೀಗೆ
ಕಳೆದ ಮಾರ್ಚ್ ಮೊದಲ ವಾರ ಇಲ್ಲಿನ ಚೌಟರ ತೋಟದಲ್ಲಿ ನಡೆದ ಕೃಷಿಮೇಳದಲ್ಲಿ ಡಿ.ಕೆ. ಚೌಟರ ಹೆಸರಿನಲ್ಲಿ ಐವರು ಕೃಷಿಕರನ್ನು ಪ್ರೋತ್ಸಾಹಧನದ ಜತೆ ಗೌರವಿಸಲಾಯಿತು. ಈ ಸಂದರ್ಭ ಹಿರಿಯ ಪ್ರಗತಿಪರ ಕೃಷಿಕ, ಪತ್ರಕರ್ತ ಶ್ರೀ ಪಡ್ರೆ ಮುಂದಾಳತ್ವದಲ್ಲಿ ತರಕಾರಿ ಬೆಳೆ, ಮಾರಾಟದ ಸವಾಲು ಮತ್ತು ಪೂರಕ ವಿಷಯಗಳ ಮೇಲೆ ಸಂವಾದ ನಡೆಯಿತು. ಇಲ್ಲಿ ‘ನಮ್ಮ ಊರಿಗೆ ನಮ್ಮದೇ ತರಕಾರಿ’ ಪರಿಕಲ್ಪನೆಯನ್ನು ಮೊದಲು ಮುಂದಿಟ್ಟವರು ಡಾ.ಜಯಪ್ರಕಾಶ್ ತೊಟ್ಟೆತ್ತೋಡಿ. ಅವರು ಅಲ್ಲಿಗೆ ಸುಮ್ಮನಾಗಲಿಲ್ಲ. ಪ್ರಯೋಗಕ್ಕೆ ಇಳಿದೇ ಬಿಟ್ಟರು. ಆರಂಭದಲ್ಲಿ ಅವರ ಮನೆ ಪಡಸಾಲೆಯನ್ನೇ ವ್ಯವಹಾರಕ್ಕೆ ಬಿಟ್ಟುಕೊಟ್ಟರು. ತೂಕಕ್ಕೆ ತಮ್ಮ ಬಳಿಯಲ್ಲೇ ಇದ್ದ ಸ್ಕೇಲ್ ಕೊಟ್ಟರು.
ಅದ್ಭುತ ಸ್ಪಂದನೆ ಹೊಸ ಪ್ರಯೋಗ ಪೂರ್ಣರೂಪದಲ್ಲಿ ಚಾಲನೆ ಪಡೆದದ್ದು ಕರೊನಾಕ್ಕೆ ದೇಶವೇ ದಿಗ್ಬಂಧನಕ್ಕೆ ಒಳಗಾಗಿ ಕೆಲ ದಿನ ಕಳೆದಾಗ. ಮಾರ್ಚ್ 30 ಆರಂಭ. ದಿನಂಪ್ರತಿ ಸುಮಾರು 40 ಕೆ.ಜಿಗೂ ಅಧಿಕ ತರಕಾರಿ ಮಾರಾಟವಾಗುತ್ತಿದೆ. ಇಲ್ಲಿವರೆಗೆ 10 ದಿನಗಳಲ್ಲಿ 3 ಕ್ವಿಂಟಾಲ್ಗೂ ಅಧಿಕ ತರಕಾರಿ ಮಾರಾಟವಾಗಿದೆ. ಸುಮಾರು 15 ಸಾವಿರ ರೂ. ವ್ಯವಹಾರ.
ಹೊಸ ಪ್ರಯೋಗ ಹಳೇ ಮಾರುಕಟ್ಟೆ ವ್ಯವಸ್ಥೆಯ ಜತೆ ಮುಂದಿನ ದಿನಗಳಲ್ಲಿ ಸಾಗಬಹುದು. ಸ್ವಲ್ಪ ವಿಸ್ತಾರವಾಗಿ ವ್ಯವಹಾರ ನಡೆಯುವಾಗ ಕೃಷಿಕ ಮನೆ ಸಮೀಪದ ತೆರೆದ ಪ್ರದೇಶಕ್ಕೂ ಬರಬೇಕಾಗಬಹುದು. ಆದರೆ ಸ್ಥಳೀಯವಾಗಿ ಮಾರುಕಟ್ಟೆ ಅಭಿವೃದ್ಧಿ ಮತ್ತು ನಗರದ ಅವಲಂಬನೆ ಕಡಿಮೆಗೊಳಿಸಲು ಈ ಯೋಜನೆ ಖಂಡಿತಾ ನೆರವಾಗುತ್ತದೆ. ಶ್ರೀಪಡ್ರೆ ಪ್ರಗತಿಪರ ಕೃಷಿಕ ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ತಮ್ಮ ಆಶ್ರಮ ಪರಿಸರದಲ್ಲಿ ಹೊಸ ಪರಿಕಲ್ಪನೆ ತರಕಾರಿ ಮಾರುಕಟ್ಟೆ ಆರಂಭಿಸಲು ಭರವಸೆ ನೀಡಿದ್ದಾರೆ. ಅನೇಕ ಕೃಷಿಕ ಮಿತ್ರರು ಈ ಬಗ್ಗೆ ಆಸಕ್ತಿ ತೋರಿದ್ದಾರೆ. ಡಾ.ಜಯಪ್ರಕಾಶ್ ವೈದ್ಯ, ಕೃಷಿಕ ಕರೊನಾ ಲಾಕ್‌ಡೌನ್‌ನಿಂದ ನನಗೆ ಒಂದು ಕೆಜಿ ತರಕಾರಿ ಕೂಡ ವೇಸ್ಟ್ ಆಗಿಲ್ಲ. ನನಗೆ ಅಗತ್ಯವಿರುವ ಹಣ ಮನೆ ಬಾಗಿಲಿಗೆ ಬಂದಿದೆ. ಶ್ರೀಧರ ಶೆಟ್ಟಿ ಕೃಷಿಕ