ಹಾಪ್‌ಕಾಮ್ಸ್ನಿಂದ ತರಕಾರಿ ಮಾರುಕಟ್ಟೆ

2 ckm 1
ಚಿಕ್ಕಮಗಳೂರಿನ ಜಿಲ್ಲಾ ಕೃಷಿಕ ಸಮಾಜದ ಆವರಣದಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಚ್.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಹಾಪ್‌ಕಾಮ್ಸ್ ಸಭೆಯಲ್ಲಿ ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ಅವರನ್ನು ಅಭಿನಂದಿಸಲಾಯಿತು. ವೆಂಕಟೇಶ್ ಚೌಹಾಣ್, ತ್ರಿವೇಣಿರಾವ್, ವಿಶ್ವಾಸ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ತರಕಾರಿ ಬೆಳೆಯುವ ರೈತರಿಗೆ ಯೋಗ್ಯವಾದ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಲು ಹಾಪ್‌ಕಾಮ್ಸ್ ಸಂಸ್ಥೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುಸಜ್ಜಿತವಾದ ಹಾಪ್‌ಕಾಮ್ಸ್ ಮಳಿಗೆಗಳು ಮೊದಲನೇ ಹಂತದಲ್ಲಿ ಚಿಕ್ಕಮಗಳೂರು ನಗರಸಭೆ ವ್ಯಾಪ್ತಿಯ ೧೬ ಸ್ಥಳಗಳಲ್ಲಿ ಆರಂಭವಾಗಲಿವೆ ಎಂದು ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್ ತಿಳಿಸಿದರು.

ನಗರದ ಜಿಲ್ಲಾ ಕೃಷಿಕ ಸಮಾಜದ ಆವರಣದಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಚ್.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಹಾಪ್‌ಕಾಮ್ಸ್ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ತರಕಾರಿ ಮಾತ್ರವಲ್ಲದೆ ಹಣ್ಣು ಹಾಗೂ ನಂದಿನಿ ಹಾಲು ಹಾಗೂ ಉತ್ಪನ್ನಗಳು ಲಭ್ಯವಿರಲಿವೆ ಎಂದರು.
ತರಕಾರಿ ಹಾಗೂ ಹಣ್ಣು ಬೆಳೆಯುವ ರೈತರಿಗೆ ಮಾರುಕಟ್ಟೆ ಸೌಲಭ್ತ ಒದಗಿಸುವ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ತರಕಾರಿ ಹಾಗೂ ಹಣ್ಣುಗಳು ಇಲ್ಲಿ ದೊರೆಯಲಿವೆ. ಇದಕ್ಕಾಗಿ ನಗರದ ಎಪಿಎಂಸಿಯಲ್ಲಿ ಗೋದಾಮು ತೆರೆಯಲಾಗುತ್ತದೆ. ರೈತರು ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾಗಿದ್ದು, ರೈತ ಹಾಗೂ ಗ್ರಾಹಕ ಸ್ನೇಹಿಯಾಗಿ ಹಾಪ್‌ಕಾಮ್ಸ್ ಹೊರಹೊಮ್ಮಲಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಎಚ್.ಕುಮಾರಸ್ವಾಮಿ, ಎ.ಎನ್.ಮಹೇಶ್ ಅವರು ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆಯಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಸರ್ಕಾರದ ಪ್ರಮುಖ ಜವಾಬ್ದಾರಿಯಾದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ಅರಣ್ಯ ವಸತಿ ವಿಹಾರಧಾಮಗಳ ನಿಗಮದ ಅಧ್ಯಕ್ಷರಾಗಿ, ಪ್ರಸ್ತುತ ರಾಜ್ಯ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿಯ ಅಧ್ಯಕ್ಷರಾಗಿ, ಜಿಲ್ಲೆಯ ರಾಜಕೀಯ, ಸಹಕಾರ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶ್ ಚೌಹಾಣ್, ಸಹಕಾರ ಇಲಾಖೆ ಉಪನಿಬಂಧಕಿ ತ್ರಿವೇಣಿ ರಾವ್, ಕೃಷಿ ಅಧಿಕಾರಿ ವಿಶ್ವಾಸ್, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಸುರೇಶ್, ಸಹಾಯಕ ತೋಟಗಾರಿಕಾ ಅಧಿಕಾರಿ ವಾಣಿ, ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ರೇಣುಕಾರಾದ್ಯ, ಹಾಪ್‌ಕಾಮ್ಸ್ ನಿರ್ದೇಶಕರಾದ ಮಲ್ಲೇಶಪ್ಪ, ಆನಂದ್, ಮೋಹನ್‌ಕುಮಾರಿ, ಜಯಮ್ಮ ಹಾಗೂ ಶಶಿಕಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net