ತರಕಾರಿ, ಹಣ್ಣು ದರ ದುಪ್ಪಟ್ಟು

vegetable
Published on

ಮಂಗಳೂರು: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತರಕಾರಿ, ಹಣ್ಣು , ಜಿನಸಿ ದರ ದುಪ್ಪಟ್ಟಾಗಿದೆ.

ಹೊರ ಜಿಲ್ಲೆಗಳಿಂದ ಹಣ್ಣು, ತರಕಾರಿ, ಜಿನಸಿ ಪೊರೈಕೆಯಾಗುತ್ತಿಲ್ಲವೆನ್ನುವುದು ಒಂದು ಕಾರಣವಾದರೆ, ಅಡಳಿತಯಂತ್ರಗಳು ವ್ಯಾಪಾರಸ್ಥ ಮೇಲೆ ಯಾವುದೇ ನಿಯಂತ್ರಣ ಹೊಂದದಿರುವುದು ಮತ್ತೊಂದು ಅಂಶ.

ಜಿಲ್ಲಾಡಳಿತ ದರ ನಿಗದಿ ಪಡಿಸಿ ಏ.14ರ ತನಕ ಪಾಲನೆ ಮಾಡುವಂತೆ ಆದೇಶ ಹೊರಡಿಸಿದೆ. ಆದರೆ ವ್ಯಾಪಾರಿಗಳು ಹಾಪ್‌ಕಾಮ್ಸ್ ಸಹಿತ ಎಲ್ಲಿಯೂ ಇದನ್ನು ಪಾಲಿಸುತ್ತಿಲ್ಲ. ಅಂಗಡಿಗಳಲ್ಲಿ ದರ ಪಟ್ಟಿಯನ್ನು ತೂಗಿ ಹಾಕುತ್ತಿಲ್ಲ ಕೂಡಾ. ಉಡುಪಿಯಲ್ಲಿ ಕೆಲವು ಕಡೆಗಳಲ್ಲಿ ದರ ಪಟ್ಟಿ ಕಾಣ ಸಿಗುತ್ತದೆ.

ಜಿಲ್ಲಾಡಳಿತ ಟೊಮ್ಯಾಟೋಗೆ 30 ರೂ. ದರ ನಿಗದಿ ಮಾಡಿದ್ದು, 40ರೂ. ಮಾರಾಟ ಮಾಡಲಾಗುತ್ತಿದೆ. ತೊಂಡೆಕಾಯಿ 40ರೂ. ಬದಲು 60 ರೂ., ಬೀಟ್‌ರೂಟ್ 28ರ ಬದಲು 38, ಕ್ಯಾಬೇಜ್ 30ರೂ. ಬದಲು 45ರೂ., ಸೋರೆಕಾಯಿ 30ರೂ. ಬದಲು 40ರೂ., ಆಲೂಗಡ್ಡೆ 50ರೂ. ಬದಲು 60ರೂ., ಕಿತ್ತಳೆ 75ರೂ. ಬದಲು 80ರೂ., ನೇಂದ್ರ ಬಾಳೆ ಹಣ್ಣು 40ರೂ. ಬದಲು 60ರೂ. ದುಪ್ಪಟ್ಟು ದರದಲ್ಲಿ ಮಾರಾಟವಾಗುತ್ತಿದೆ.

ಮಂಗಳೂರು ನಗರದ ಹಾಪ್‌ಕಾಮ್ಸ್ ಅಂಗಡಿಗಳಲ್ಲೂ ಪಟ್ಟಿಯನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಅಂಗಡಿಯವರಲ್ಲಿ ವಿಚಾರಿಸಿದರೆ ‘ನಮಗೆ ಕಡಿಮೆಯಲ್ಲಿ ಸಿಗುವುದಿಲ್ಲ. ದರ ಪಟ್ಟಿ ಪ್ರಕಾರ ಮಾರಾಟ ಮಾಡಿದರೆ ಅಸಲು ಆಗುವುದಿಲ್ಲ’ ಎನ್ನುತ್ತಿದ್ದಾರೆ.

ಜಿಲ್ಲಾಡಳಿತ ಡೋರ್ ಡೆಲಿವರಿ ಮಾಡಲು ಹಾಪ್‌ಕಾಮ್ಸ್‌ಗೆ ಸೂಚನೆ ನೀಡಿದ್ದರೂ, ಪಾಲನೆಯಾಗುತ್ತಿಲ್ಲ. ದುಪ್ಪಟ್ಟು ದರವಿದ್ದರೂ ಗ್ರಾಹಕರು ಅನಿವಾರ್ಯವಾಗಿ ಖರೀದಿಸುತ್ತಿದ್ದಾರೆ.ಯಾರು ಕೂಡ ಪ್ರಶ್ನೆ ಮಾಡಲು ಮುಂದಾಗುತ್ತಿಲ್ಲ. ಗ್ರಾಹಕರು ವಾರಕ್ಕೆ ಬೇಕಾಗುವಷ್ಟು ತರಕಾರಿ, ಹಣ್ಣು ಖರೀದಿಸಿ ಕೊಂಡೊಯ್ಯುತ್ತಿದ್ದಾರೆ.

ಉಡುಪಿಯಲ್ಲೂ ದರ ಏರಿಕೆ: ಉಡುಪಿಗೆ ಇಂದೋರ್, ಮಹಾರಾಷ್ಟ್ರದ ಲಾತೂರ್‌ನಿಂದ ತರಕಾರಿ ಪೂರೈಸಲು ವಾಹನ ಚಾಲಕರು ಮುಂದಾಗುತ್ತಿಲ್ಲ. ಹೀಗಾಗಿ ಜಿಲ್ಲೆಯ ತರಕಾರಿ ಮಂಡಿಗಳು ಚಿಕ್ಕಮಗಳೂರು ಹಾಗೂ ಬೆಂಗಳೂರು ಮಾರುಕಟ್ಟೆಯನ್ನೇ ಅವಲಂಬಿಸುವಂತಾಗಿದೆ. ಪಾಲಕ್ ಇನ್ನಿತರ ಸೊಪ್ಪುಗಳು ಚಿತ್ರದುರ್ಗದಿಂದ ಬರುತ್ತಿವೆ.

ಸ್ಥಳೀಯಾಡಳಿತ ಸೂಚನೆಯಂತೆ ಅನೇಕ ತರಕಾರಿ ಅಂಗಡಿಗಳಲ್ಲಿ ದರ ಪಟ್ಟಿ ಪ್ರಕಟಿಸಲಾಗಿದೆ. ಆದರೆ ಸಂತೆಗೆ ಹೋಗುತ್ತಿದ್ದ ತರಕಾರಿಗಳನ್ನು ಕೆಲವರು ಗಾಡಿಗಳಲ್ಲಿ ತಂದು ನಗರ ಪ್ರದೇಶಗಳ ಅಯಕಟ್ಟಿನ ಜಾಗದಲ್ಲಿ ನಿಲ್ಲಿಸಿ ವ್ಯಾಪಾರ ಮಾಡುತ್ತಿರುವುದು ಕಂಡುಬಂದಿದೆ. ಅಂಗಡಿ ದರಕ್ಕೆ ಹೋಲಿಸಿದರೆ ಗಾಡಿಗಳಲ್ಲಿ ಆಯ್ದ ತರಕಾರಿಗಳನ್ನು ಶೇ. 20ರಷ್ಟು ಕಡಿಮೆ ದರದಲ್ಲಿ ಮಾರಾಟಮಾಡಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ನೈಜ ದರದ ಪರಿಚಯವಾಗುತ್ತಿಲ್ಲ. 10 ದಿನದ ಹಿಂದೆ ರೂ.28 ಇದ್ದ ಟೊಮ್ಯಾಟೊ ಚಿಲ್ಲರೆ ಮಾರಾಟ ದರ 35ಕ್ಕೆ ಏರಿಕೆಯಾಗಿದೆ. ಬಟಾಟೆ 38 ರಿಂದ 45ಕ್ಕೆ, ಬೀನ್ಸ್ 60 ರಿಂದ 70ಕ್ಕೆ, ಬೆಂಡೆ 40ರಿಂದ 60ಕ್ಕೆ ಏರಿಕೆಯಾಗಿದೆ. ಅಲಸಂಡೆ ಮತ್ತು ಬದನೆ ದರ ಯಥಾಸ್ಥಿತಿಯಲ್ಲಿದ್ದು, ಕೆಜಿಗೆ 50 ಮತ್ತು 40ರಂತೆ ಮಾರಾಟವಾಗುತ್ತಿದೆ. ಕಿತ್ತಳೆ 60ರಿಂದ 70ಕ್ಕೆ, ದಾಳಿಂಬೆ 100ರಿಂದ 140ಕ್ಕೆ, ಮೂಸಂಬಿ 50ರಿಂದ 60ಕ್ಕೆ ಏರಿಕೆಯಾಗಿದ್ದರೆ, ದ್ರಾಕ್ಷಿ 100 ರಿಂದ 80ಕ್ಕೆ ಇಳಿಕೆಯಾಗಿದೆ.

ದಿನಸಿ ಸಾಮಗ್ರಿಗಳ ದರ ಶೇ.20ರಷ್ಟು ಹೆಚ್ಚಳ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಸಿ ಸಗಟು ವಹಿವಾಟಿನಲ್ಲಿ ಸಾಮಗ್ರಿಗಳ ದರ ಶೇ.20ರಷ್ಟು ಹೆಚ್ಚಳವಾಗಿದೆ. ಲಾರಿ ಬಾಡಿಗೆ ಏರಿಕೆಯಾಗಿರುವುದರಿಂದ ಅಕ್ಕಿ, ಕಾಳು ದರದಲ್ಲೂ ಹೆಚ್ಚಳವಾಗಿದೆ. ಚಿಲ್ಲರೆ ವ್ಯಾಪಾರದಲ್ಲಿ ಸರಿಸುಮಾರು ಶೇ.50ರಷ್ಟು ಬೆಲೆ ಏರಿಕೆಯಾಗಿದೆ. ಸಗಟು ವ್ಯಾಪಾರದಲ್ಲಿ ಉದ್ದಿನ ಬೇಳೆ 100 ರಿಂದ 120ರೂ., ತೊಗ್ರಿ ಬೇಳೆ 60ರಿಂದ 80ರೂ., ಹೆಸರು ಬೇಳೆ 100ರಿಂದ 125ರೂ., ಕಡ್ಲೆ ಬೇಳೆ 62ರಿಂದ 72 ರೂ., ಮೆಣಸು 220ರಿಂದ 280ರೂ., ಸಕ್ಕರೆ 35ರಿಂದ 38ರೂ., ಕಡ್ಲೆ 60 ರಿಂದ 70ರೂ., ಅಕ್ಕಿ ಕ್ವಿಂಟಾಲ್‌ಗೆ 200ರೂ. ಹೆಚ್ಚಳವಾಗಿದೆ. ಆದರೆ ಚಿಲ್ಲರೆ ವ್ಯಾಪಾರಿಗಳು ಮತ್ತಷ್ಟು ಬೆಲೆ ಏರಿಸಿ ಮಾರಾಟ ಮಾಡುತ್ತಿದ್ದಾರೆ.

ಪೂರೈಕೆ ಕಡಿಮೆ: ಲಾಕ್‌ಡೌನ್ ಪರಿಣಾಮ ತರಕಾರಿ ಪೂರೈಕೆಯಾಗುತ್ತಿಲ್ಲ. ಇದರಿಂದ ತರಕಾರಿ ದರ ಹೆಚ್ಚಳವಾಗಿದೆ. ಊರಿನ ತರಕಾರಿಗಳು ಮಾರುಕಟ್ಟೆಗೆ ಬಾರದೆ ಅಲ್ಲೇ ಉಳಿದು ಕೊಂಡಿದೆ. ಸೆಂಟ್ರಲ್ ಮಾರುಕಟ್ಟೆಯನ್ನು ಸ್ತಬ್ಧ ಮಾಡಿರುವುದರಿಂದ ಹೊರ ಜಿಲ್ಲೆಗಳಿಂದ ತರಕಾರಿ ಬರುವುದು ಕಡಿಮೆಯಾಗಿದೆ ಜನಾರ್ದನ ಸೆಂಟ್ರಲ್ ಮಾರುಕಟ್ಟೆ ವ್ಯಾಪಾರಿ ತರಕಾರಿ ಹಾಗೂ ಹಣ್ಣು ಹಂಪಲುಗಳ ಏಕರೂಪ ದರ ಪಟ್ಟಿಯನ್ನು ತೂಗು ಹಾಕಬೇಕು. ಇದರ ಕೆಳಗಡೆ ಹೆಚ್ಚಿನ ದರ ವಸೂಲಿ ಮಾಡುವವರ ವಿರುದ್ಧ ದೂರು ನೀಡಲು ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಸಂಖ್ಯೆ ನಮೂದಿಸಬೇಕು. ಈಗ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕಿಶೋರ್ ಸುರತ್ಕಲ್ ನಿವಾಸಿ 1077ಕ್ಕೆ ದೂರು ನೀಡಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹಾಪ್‌ಕಾಮ್ಸ್‌ಗಳು ಡೋರ್‌ಡೆಲಿವರಿ ಮಾಡಬೇಕು ಮತ್ತು ನಿಗದಿತ ದರ ವಿಧಿಸಬೇಕು ಎಂದು ಆದೇಶ ನೀಡಲಾಗಿದೆ. ಇದರ ಉಲ್ಲಂಘನೆಯಾಗುತ್ತಿದ್ದರೆ ಸಾರ್ವಜನಿಕರು 1077ಗೆ ಕರೆ ಮಾಡಬಹುದು. ಇತರ ವ್ಯಾಪಾರಿಗಳು ಕೂಡ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದರೆ ದೂರು ನೀಡಬಹುದು. ಸಿಂಧೂ ಬಿ.ರೂಪೇಶ್ ಜಿಲ್ಲಾಧಿಕಾರಿ ದಕ್ಷಿಣ ಕನ್ನಡ ಕರಾವಳಿಗೆ ಬೇಳೆ ಕಾಳುಗಳು ಕಲಬುರಗಿಯಿಂದ ಪೂರೈಕೆಯಾಗುತ್ತಿವೆ. ಪ್ರತಿ ಕ್ವಿಂಟಾಲ್‌ಗೆ 210 ಇದ್ದ ಲಾರಿ ಬಾಡಿಗೆ 375ಕ್ಕೆ ಏರಿಕೆಯಾಗಿದೆ. ಇದರಿಂದ ಅನಿವಾರ್ಯವಾಗಿ ದಿನಸಿ ಸಾಮಗ್ರಿ ದರ ಹೆಚ್ಚಳವಾಗಿದೆ. 10 ದಿನಗಳಲ್ಲಿ ದರ ಇಳಿಕೆಯಾಗಬಹುದು . ಪದ್ಮನಾಭ ಕಾಮತ್ ಸಗಟು ವ್ಯಾಪಾರಿ , ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net