

ಚಿಕ್ಕೋಡಿ: ಇಂದಿನ ಒತ್ತಡದ ದಿನಗಳಲ್ಲಿ ತೀವ್ರ ಹೃದಯಾಘಾತ ಸೇರಿ ಹಲವು ರೋಗಗಳಿಗೆ ಬಹಳಷ್ಟು ಜನರು ತುತ್ತಾಗುತ್ತಿದ್ದಾರೆ. ಹೀಗಾಗಿ, ಪ್ರತಿಯೊಬ್ಬರು ಅಧಿಕವಾಗಿ ತರಕಾರಿ, ಹಣ್ಣು ಹಂಪಲಯುಕ್ತ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ವಿವೇಕ ಹೊನ್ನಳ್ಳಿ ಹೇಳಿದರು.
ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಶ್ರೀಸಿದ್ದೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 33ನೇ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳ ಹವಾಮಾನದಲ್ಲಿ ವಿಪರೀತ ಪರಿಣಾಮ ಉಂಟಾಗುತ್ತಿದು,್ದ ಹಿರಿಯ ನಾಗರಿಕರು ಮನೆಯಲ್ಲಿಯೇ ವಿಶ್ರಾಂತಿ ಪಡೆದು ಆರೋಗ್ಯ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು.
ಪುರಸಭೆ ಸದಸ್ಯ ಅನಿಲ ಮಾನೆ ಮಾತನಾಡಿ, ಸಹಕಾರಿ ಸಂಘಗಳ ಯೋಜನೆ ಸದುಪಯೋಗ ಪಡಿಸಿಕೊಂಡು ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಟಿ.ಎಸ್.ಮೋರೆ ಮಾತನಾಡಿ,ಸಿದ್ದೇಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಆಕರ್ಷಕ ಯೋಜನೆಗಳ ಮೂಲಕ ಉತ್ತಮ ಸಹಕಾರಿ ಸೇವೆ ನೀಡುತ್ತಿದ್ದು,
ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಶ್ರಮ ಪ್ರಮುಖವಾಗಿದೆ ಎಂದರು. ಕೆವಿಜಿ ಬ್ಯಾಂಕ್ ಶಾಖಾಧಿಕಾರಿ ಮಹಾಂತೇಶ ಪಾಟೀಲ, ಶಿವಮೂರ್ತಿ ಪಡಲಾಳೆ ಇತರರಿದ್ದರು.