ಒಳಪಂಗಡಗಳಿಗೆ ಏಕ‌ ಮೀಸಲಾತಿ, ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮನವಿ

IMG_20250812_153837_408-1.jpg
Published on

ಹುಬ್ಬಳ್ಳಿ: ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳಿಗೂ ಒಂದೇ ತೆರನಾದ ಮೀಸಲಾತಿ ಅನ್ವಯಿಸಿ ಅದನ್ನು ಜಾರಿ ಮಾಡಬೇಕು, ಆಗಲೇ ಅಖಂಡ ವೀರಶೈವ ಲಿಂಗಾಯತ ಸಮಾಜ ಒಂದು ಎಂಬ ಭಾವ ಮೂಡಲು ಸಾಧ್ಯ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಪಂಗಡದಲ್ಲಿ ಕೆಲವರಿಗೆ ಮಾತ್ರ ಮೀಸಲಾತಿ ಸಿಗುವಂತಾದರೆ ಅದರಿಂದ ಸಮಾನತೆ, ಏಕತೆ ಬರಲು ಹೇಗೆ ಸಾಧ್ಯ? ಎಂದ ಸ್ವಾಮೀಜಿ, ಜಾತಿ ಜನಗಣತಿ ಮಾಡುವ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯ ಹೇಗೆ, ಏನು ಬರೆಸಬೇಕು ಎಂಬುದರ ಬಗ್ಗೆ ಶೀಘ್ರದಲ್ಲಿ 18 ಜಿಲ್ಲೆಗಳ ಮುಖಂಡರು, 80ಕ್ಕೂ ಹೆಚ್ಚು ಸ್ವಾಮೀಜಿಗಳು ಒಂದೆಡೆ ಸೇರಿ ಚರ್ಚಿಸಿ ಅಂತಿಮ ನಿರ್ಧಾರವನ್ನು ಸಮಾಜಕ್ಕೆ ತಿಳಿಸಲಾಗುವುದು ಎಂದರು.

ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸೇರಿಸಲಾಗಿದೆ. ರಾಜ್ಯ ಸರ್ಕಾರದಲ್ಲಿ ಪಂಚಮಸಾಲಿ ಎಂಬ ಪದವೇ ಇರಲಿಲ್ಲ. ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಗೆಜೆಟ್ ಹೊರಡಿಸಿದರು. ಇದೀಗ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಪ್ರತಿಭಟನೆ ನಡೆದಿದ್ದು, ಇನ್ನೊಂದೆಡೆ ಕಾನೂನು ಹೋರಾಟವೂ ಮುಂದುವರಿದಿದೆ ಎಂದರು.

ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ ನಡೆದಿದೆ. ಇದು ಸಂವಿಧಾನಬದ್ಧ ಹಕ್ಕು, ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಯನ್ನು ಯಾವುದೋ ಸಮುದಾಯದ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಕೇಳಿಲ್ಲ. ಆದರೆ, ದೇಶದ 10 ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಅದೇ ರೀತಿ ಹೆಚ್ಚಿಸಿ ಕೊಡಿ ಎಂದು ಕೇಳುತ್ತಿದ್ದೇವೆ ಎಂದರು.

ಷಡ್ಯಂತ್ರ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಶ್ರೀ ವಚನಾನಂದ ಸ್ವಾಮೀಜಿ, ಬಹಳ ಹಿಂದಿನಿಂದಲೂ ಹಿಂದೂ ಧರ್ಮದ ಬೇರುಗಳನ್ನು ಸಡಿಲಗೊಳಿಸುವ ಪ್ರಯತ್ನಗಳು ನಡೆಯುತ್ತ ಬಂದಿವೆ. ಶಬರಿಮಲೈ ಅಯ್ಯಪ್ಪ, ಶನಿಸಿಂಗನಾಪುರ ಹೀಗೆ ಹಲವು ಕಡೆಗಳಲ್ಲಿ ಧಕ್ಕೆ ತರುವ ಕೆಲಸ ನಡೆಯಿತು. ಮೊಸರಲ್ಲಿ ಕಲ್ಲು ಹುಡುಕಿದ ಹಾಗೆ ಇಲ್ಲಿಯೂ ಅಂತಹದೇ ಕಾರ್ಯ ನಡೆಯುತ್ತಿದೆ. ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾಧಿಕಾರಿಗಳು ಸಾಕಷ್ಟು ಸಮಾಜಮುಖಿ ಕೆಲಸ ಮಾಡಿದ್ದಾರೆ. ಇಡೀ ಜಗತ್ತು ಹಿಂದು ಧರ್ಮದ ಕಡೆಗೆ ತಿರುಗಿ ನೋಡುತ್ತಿರುವ ಸಂದರ್ಭದಲ್ಲಿ ಕೆಲವರು ಅದರ ವಿರುದ್ಧ ಷಡ್ಯಂತ್ರ ಮಾಡುತ್ತಿರುವುದು ಕಂಡು ಬರುತ್ತದೆ. ಹಾಗಾಗಿ ನಾವು ಧರ್ಮಸ್ಥಳದ ಪರವಾಗಿ ನಿಲ್ಲುತ್ತೇವೆ ಎಂದರು.

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಜಿ.ಜಿ. ದ್ಯಾವನಗೌಡ್ರ, ಡಾ. ಎಂ.ಎಂ. ನುಚ್ಚಿ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net