ವೀರಶೈವ ಲಿಂಗಾಯತ ಚಾರಿತ್ರಿಕ ಸಮಾವೇಶ,  ಸುವರ್ಣಾಕ್ಷರಗಳಲ್ಲಿ ಬರೆದಿಡುವ ಕಾರ್ಯ,  ಶ್ರೀರಂಭಾಪುರಿ ಜಗದ್ಗುರುಗಳ ಅಭಿಮತ

IMG_20250919_161215_785.jpg
Published on

ಹುಬ್ಬಳ್ಳಿ: ವೀರಶೈವ ಲಿಂಗಾಯತ ಏಕತಾ ಸಮಾವೇಶವು ಚಾರಿತ್ರಿಕವಾಗಿದೆ. ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದೆ. ಎಲ್ಲ ಒಳಪಂಗಡಗಳು ಒಂದೇ ಸೂತ್ರದಡಿ ತಂದು ಸಮಾಜಕ್ಕೆ ಬಹುದೊಡ್ಡ ಶಕ್ತಿ ತುಂಬುವ ಕೆಲಸ ಆಗಿದೆ. ಎಲ್ಲ ಮಠಾಧೀಶರು ಇದನ್ನು ಸಂತೋಷದಿಂದ ಸ್ವಾಗತ ಮಾಡಿದ್ದೇವೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಜಗದ್ಗುರುಗಳು ಹೇಳಿದರು.

ಇಲ್ಲಿಯ ನೆಹರು ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಏಕತಾ ಸಮಾವೇಶದಲ್ಲಿ ಅವರು ಆಶೀರ್ವಚನ ನೀಡಿದರು.

ಸಮಾಜದ ಹಿತದೃಷ್ಟಿಯಿಂದ ವೈಶಿಷ್ಟ್ಯಪೂರ್ಣ ಸಮಾರಂಭದಲ್ಲಿ ಸಾವಿರಾರು ಮಠಾಧೀಶರು ಒಂದೆಡೆ ಸೇರಿ ಸಮಾಜದ ಶಕ್ತಿ ಕಟ್ಟಿ ಬೆಳೆಸಲು ಮುಂದೆ ಬಂದಿದ್ದಾರೆ. ಇದಕ್ಕೆ ಎಲ್ಲರೂ ಕೈಜೋಡಿಸಿದಾಗ ಯಶಸ್ವಿಯಾಗಲು ಸಾಧ್ಯ. ಎಲ್ಲ ಮಠಾಧಿಪತಿಗಳ ಧ್ವನಿ ಒಂದೇ ಆಗಿದೆ ಎಂದರು.

ಈ ಮಧ್ಯೆ ಕೆಲವರು ಒಡಕಿನ ಮಾತನಾಡುತ್ತಿದ್ದಾರೆ. ಪಂಚಪೀಠಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಭಕ್ತರಿಗೆ ಸಂಸ್ಕಾರ ಹೇಳಿಕೊಡುವ ಬಾಯಿಯಿಂದ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ಅಂಥವರಿಗೆ ಉತ್ತರ ಕೊಡಲು ನಮಗೂ ಬರುತ್ತದೆ. ಆದರೆ, ಪೀಠದ ಗೌರವಕ್ಕಾಗಿ ಸುಮ್ಮನೆ ಇರಬೇಕಾಗಿದೆ ಎಂದು ಚಾಟಿ ಬೀಸಿದರು.

ಬಹುಸಂಖ್ಯಾತರಾದ ವೀರಶೈವ ಲಿಂಗಾಯತರನ್ನು ಛಿದ್ರಗೊಳಿಸುವ ಕೆಲಸ ನಡೆಯುತ್ತಿದೆ. ದೇಶದಲ್ಲಿ ಆರು ಧರ್ಮಗಳಿಗೆ ಮಾನ್ಯತೆ ಸಿಕ್ಕಿದೆ. ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ವೀರಶೈವ ಲಿಂಗಾಯತ ಮಹಾಸಭಾ ಪ್ರಯತ್ನ ಮಾಡಬೇಕು. ರಾಜ್ಯದಲ್ಲಿ ಜಾತಿ ಸಮೀಕ್ಷೆಯ ಪಟ್ಟಿಯಲ್ಲಿರುವ ಜಾತಿಗಳನ್ನು ನೋಡಿದರೆ ಎದೆ ಝಲ್ ಎನ್ನುತ್ತದೆ. ಅಸಂಖ್ಯ ಹೊಸ ಜಾತಿಗಳನ್ನು ಸೇರಿಸಲಾಗಿದೆ.
ವೀರಶೈವ ಲಿಂಗಾಯತ ಶಕ್ತಿ ಕುಂಠಿತಗೊಳಿಸುವ ಕಾರ್ಯ ಕಾಣದ ಕೈಗಳಿಂದ ನಡೆಯುತ್ತಿದೆ. ಹಾಗಾಗಿ ಸಮೀಕ್ಷೆ ಸಂದರ್ಭದಲ್ಲಿ ಜಾಗ್ರತೆ ವಹಿಸಬೇಕು ಎಂದು ಸೂಚ್ಯವಾಗಿ ಹೇಳಿದರು.

ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಎರಡನ್ನೂ ಬರೆಸಬೇಕು, ಉಪಜಾತಿ ಕಾಲಂನಲ್ಲಿ ಒಳಪಂಗಡದ ಹೆಸರು ಬರೆಸಿ ಎಂದು ಶ್ರೀಗಳು ಸೂಚಿಸಿದರು.

ಶಿರಹಟ್ಟಿಯ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಸಮಾಜ ಒಗ್ಗೂಡಿಸುವ ಬಂಗಾರದಂತಹ ಕೆಲಸ ನಡೆಯುತ್ತಿದೆ. ಎಲ್ಲರೂ ಸನ್ಮಾರ್ಗದಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು.

ನೇತೃತ್ವ ವಹಿಸಿದ್ದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಒಂದಾಗಿರಬೇಕು. ಯಾವುದೇ ಉಪ ಪಂಗಡದವರು ಹೊರಗೆ ಹೋಗಬಾರದು. ಸಮಾಜದ ಜನರೆಲ್ಲ ನಾವು ವೀರಶೈವ ಲಿಂಗಾಯತವೆಂದು, ಸ್ವಾಮೀಜಿಗಳು ನಾವು ವೀರಶೈವ ಲಿಂಗಾಯತ ಮಠಾಧೀಶರೆಂದು ಹೇಳುವಂತಾಗಬೇಕು. ಆಗಲೇ ಒಕ್ಕಟ್ಟು ಸಾಧ್ಯ. ಸಮಾವೇಶದ ಮೂಲಕ ವೀರಶೈವ ಲಿಂಗಾಯತ ಒಂದು ಎಂಬ ಸಂದೇಶ ಸಾರಿದ್ದೇವೆ ಎಂದರು.

ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಹಾನಗಲ್ಲ ಕುಮಾರಶಿವಯೋಗಿಗಳು ನೂರು ವರ್ಷದ ಹಿಂದೆ ಕಂಡ ಕನಸು ನನಸಾಗಿದೆ. ಎಲ್ಲರೂ ಒಂದೇ ವೇದಿಕೆಗೆ ಬಂದಿರುವದನ್ನು ನೋಡಿ ಸಂತೋಷವಾಗಿದೆ. ಇದು ಸಮಾಜದ ಭಕ್ತಿ ಪ್ರದರ್ಶನವಾಗಿದೆ ಎಂದರು.

ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ವೀರಶೈವ ತತ್ವ ವಿಶ್ವಮಾನ್ಯವಾಗಿದೆ. ವೀರಶೈವ ಲಿಂಗಾಯತ ಸಮಾನಾರ್ಥ ಕೊಡುವ ಪದಗಳು. ವೀರಶೈವ ಗುರುಗಳು ಲಿಂಗವನ್ನು ಆಯತ ಮಾಡಿಕೊಂಡಿದ್ದರಿಂದ ಲಿಂಗಾಯತ ಆಗಿದೆ ಎಂದು ಪ್ರತಿಪಾದಿಸಿದರು.

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಮಹಾಸಭಾ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ, ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು.
ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net