

ಕಲಬುರಗಿ: ವೀರಶೈವ ಲಿಂಗಾಯತರು ಒಳಪಂಗಡಗಳಲ್ಲಿನ ಭಿನ್ನಾಭಿಪ್ರಾಯದಿಂದಲೇ ಜನಸಂಖ್ಯೆಯ ಬಲ ಕ್ಷೀಣಿಸಿದಂತೆ ಕಾಣುತ್ತಿದೆ. ಆದ್ದರಿಂದ ಸಮಾಜದ ಶಕ್ತಿ ಪ್ರದರ್ಶನ ಕುಂಠಿತವಾಗುತ್ತಿದೆ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಸಮಾಜದಿಂದ ಭಾನುವಾರ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳಿಗಾಗಿ ಭಾನುವಾರ ಹಮ್ಮಿಕೊಂಡ ರಾಜ್ಯಮಟ್ಟದ ವಧುವರರ ದ್ವಿತೀಯ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದ ಅವರು, ಜಾತಿ ಗಣತಿಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಕೇವಲ 60 ಲಕ್ಷ ಎಂದು ಹೇಳುತ್ತಿದೆ. ಕರ್ನಾಟಕದ ಕರಾವಳಿ ಭಾಗ ಹೊರತುಪಡಿಸಿ ಇಡೀ ರಾಜ್ಯದಲ್ಲಿ ವೀರಶೈವ ಲಿಂಗಾಯತರಿದ್ದಾರೆ. ಆದರೆ ಜಾತಿಯ ಒಳಪಂಗಡಗಳಿಂದ ನಮ್ಮ ಶಕ್ತಿ ಕಳೆಕುಂದುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಾಸಕ ಅಲ್ಲಮಪ್ರಭು ಪಾಟೀಲ್, ಎಲ್ಲ ಒಳಪಂಗಡಗಳನ್ನು ಒಂದೇ ವೇದಿಕೆಯಡಿ ತರುವ ವಧು ವರರ ಸಮಾವೇಶವೂ ಜಾತಿ ನಿರ್ಮೂಲನೆಗೆ ಬಹುದೊಡ್ಡ ವೇದಿಕೆಯಾಗಿದೆ. ಬಸವಣ್ಣನವರು ೧೨ನೇ ಶತಮಾನದಲ್ಲಿ ಎಲ್ಲರೂ ಒಂದಾಗಿ ಬಾಳೋಣ ಎಂಬ ಸಂದೇಶ ನೀಡಿದ್ದರು. ಸಮಾವೇಶದಿಂದ ಉಳಿತಾಯವಾಗುತ್ತದೆ ಎಂದು ಹೇಳಿದರು.
ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ ಮಾತನಾಡಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮಾತನಾಡಿದರು. ವೀರಶೈವ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಘೂಳಿ ಸ್ವಾಗತಿಸಿದರು. ಸುಭಾಷ ಬಿಜಾಪುರ, ಕಲ್ಯಾಣಪ್ಪ ಪಾಟೀಲ್, ಚಂದ್ರಶೇಖರ ತಳ್ಳಳ್ಳಿ, ಚಂದ್ರಶೇಖರ ಕಕ್ಕೇರಿ, ರಾಜಕುಮಾರ ಕೋಟೆ, ಬಸವರಾಜೇಶ್ವರಿ ಕಕ್ಕೇರಿ, ಕಲ್ಯಾಣರಾವ ಯಲಮಡಗಿ, ವೀರೇಶ ಗಂಧದಮಠ, ಗುರುಪಾದಪ್ಪ ಪಲ್ಲಕ್ಕಿ, ಸಂಜೀವಕುಮಾರ ಕಪಲಾಪುರ ಇತರರಿದ್ದರು.