ಸುಳ್ಳು ಅಟ್ರಾಸಿಟಿಗೆ ವೀರಶೈವರ ಕಿಡಿ

1801KLB01
Published on

ಕಲಬುರಗಿ: ವೀರಶೈವ ಲಿಂಗಾಯತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಸಮಾಜದ ಪರ ಧ್ವನಿ ಎತ್ತುವ, ಅನ್ಯಾಯದ ಬಗ್ಗೆ ಪ್ರಶ್ನಿಸುವ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ವಿರುದ್ಧ ಸುಳ್ಳು ಅಟ್ರಾಸಿಟಿ ಕೇಸ್ ರದ್ದು ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದಲ್ಲಿ ಶ್ರೀ ವೀರಶೈವ ಲಿಂಗಾಯತ ಮಹಾ ವೇದಿಕೆಯಿಂದ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸೇರಿದ ನೂರಾರು ಜನರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಾನವ ಸರಪಳಿ ನಿರ್ಮಿಸಿ, ಟೈರ್‌ಗಳಿಗೆ ಬೆಂಕಿ ಹಚ್ಚಿ ಸುಳ್ಳು ಕೇಸ್ ದಾಖಲಿಸಿದ ಪೊಲೀಸರು, ಜೇವರ್ಗಿ ಬಾಲಕಿ ಆತ್ಮಹತ್ಯೆ ಪ್ರಕರಣದ ದಾರಿ ತಪ್ಪಿಸುತ್ತಿರುವ ಪೊಲೀಸರ ವಿರುದ್ಧ ಕಿಡಿ ಕಾರಿದರು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸ್ ಬಳಿಯ ವಿಶ್ವಗುರು ಬಸವಣ್ಣನವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು, ಅದೇ ಸ್ಥಳದಲ್ಲಿ ನೂತನ ಮೂರ್ತಿಯನ್ನು ಸರ್ಕಾರದಿಂದ ಪ್ರತಿಷ್ಠಾಪನೆ ಮಾಡಬೇಕು. ಪದೇ ಪದೆ ಬಸವಣ್ಣನವರ ಮೂರ್ತಿಗಳಿಗೆ ಅವಮಾನದ ಪ್ರಕರಣ ನಡೆಯುತ್ತಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು. ಜೇವರ್ಗಿಯಲ್ಲಿ ಅನ್ಯಕೋಮಿನ ಯುವಕನ ಕಿರುಕುಳಕ್ಕೆ ವೀರಶೈವ ಲಿಂಗಾಯತ ಸಮಾಜದ ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕಿಡಿಗೇಡಿಗಳ ಕಿರುಕುಳವನ್ನು ನಿಯಂತ್ರಿಸಬೇಕು. ವಿನಾಕಾರಣ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸಿ, ಕಿರುಕುಳ ನೀಡುತ್ತಿದ್ದು, ಕೂಡಲೇ ಕೇಸ್ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಎಸ್‌ವಿಪಿ ಚೌಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ಆಗಮಿಸಿ, ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ವೇದಿಕೆ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ್, ಶರಣು ಪಪ್ಪಾ, ಎಂ.ಎಸ್.ಪಾಟೀಲ್ ನರಿಬೋಳ, ಗಿರಿರಾಜ ಯಳಮೇಲಿ, ವಿನೋದ ಪಾಟೀಲ್ ಸರಡಗಿ, ಲಕ್ಷಿö್ಮÃಕಾಂತ ಸ್ವಾದಿ, ಭಾಗೀರಥಿ ಗುನ್ನಾಪುರ, ಮಾಲಾ ಕಣ್ಣಿ, ಶಿವಾಜಿ, ಮಹೇಶ ಕೆಂಭಾವಿ, ದಿವ್ಯಾ ಹಾಗರಗಿ, ರಾಜು ನಾಗನಳ್ಳಿ, ಆನಂದ ಕಣಸೂರ, ಅರುಣಕುಮಾರ ಪಾಟೀಲ್ ಹಾಲಸುಲ್ತಾನಪುರ ಇತರರಿದ್ದರು.

ವೀರಶೈವ ಲಿಂಗಾಯತರು ಶಾಂತಿ, ಸಹಭಾಳ್ವೆ, ದಾಸೋಹ ಪರಂಪರೆಯನ್ನು ಹೊಂದಿದ್ದಾರೆ. ಎಲ್ಲ ಜಾತಿಯವರನ್ನು ಒಗ್ಗೂಡಿಸಿದ ಬಸವಣ್ಣನ ಮಾರ್ಗದಲ್ಲಿ ಸಾಗುತ್ತಿದ್ದಾರೆ. ನಮ್ಮ ಸಹನೆಯನ್ನು ಕೆಣಕಬಾರದು. ಸರ್ಕಾರ ಕಠಿಣ ಕ್ರಮದಿಂದ ಕಿಡಿಗೇಡಿಗಳಿಗೆ ಸ್ಪಷ್ಟ ಸಂದೇಶ ನೀಡಬೇಕು. | ಶರಣು ಪಪ್ಪಾ, ಮುಖಂಡ ವೀರಶೈವ ಸಮಾಜ

------------- ಜಿಲ್ಲೆಯಲ್ಲಿ ಶಾಂತಿಯುತ ಜೀವನ ನಡೆಸುತ್ತಿರುವ ವೀರಶೈವ ಲಿಂಗಾಯತರನ್ನು ಗುರಿಯಾಗಿಸಿ ದಾಳಿ ನಡೆಯುತ್ತಿದೆ. ಸಮಾಜದ ಪೂಜ್ಯರು, ಬಾಲಕಿಯರು, ನಾಯಕರು, ಉದ್ಯಮಿಗಳು, ಅಧಿಕಾರಿಗಳ ಮೇಲೆ ನಿರಂತರ ಭಿನ್ನ ಭಿನ್ನ ರೀತಿಯ ದಾಳಿ, ದೌರ್ಜನ್ಯ ನಡೆಯುತ್ತಿವೆ. ದೌರ್ಜನ್ಯ ಎಸಗುವವರು ಅರಿಯಬೇಕು. ವೀರಶೈವ ಸಿಡಿದರೆ ವೀರಭದ್ರ, ಪರಿಸ್ಥಿತಿ ಉಲ್ಭಣಕ್ಕೆ ಮುನ್ನ ಎಚ್ಚರಿಕೆಯಿಂದ ಇರಬೇಕು. | ದಯಾನಂದ ಪಾಟೀಲ್, ಜಿಲ್ಲಾಧ್ಯಕ್ಷ ಶ್ರೀ ವೀರಶೈವ ಲಿಂಗಾಯತ ಮಹಾ ವೇದಿಕೆ --------- ವೀರಶೈವ ಮಠಾಧೀಶರ ಬಗ್ಗೆ ಹಗುರ ಹೇಳಿಕೆ ನೀಡುವುದು, ಬಸವಣ್ಣನವರ ಮೂರ್ತಿ ಭಗ್ನ, ಸಮಾಜದ ಬಾಲಕಿಯರಿಗೆ ಕಿರುಕುಳ ನಿಂತು, ಅನ್ಯಾಯಕ್ಕೆ ನ್ಯಾಯ ದೊರೆಯದಿದ್ದರೆ ಪರಿಸ್ಥಿತಿ ಕೈ ಮೀರಿ ಹೋಗಲಿದೆ. ಸರ್ಕಾರ ನಡೆಸುವವರು ಎಲ್ಲೋ ಕುಳಿತು ಆಟ ಆಡದೆ ಅಧಿಕಾರಿಗಳು, ತಮ್ಮ ಬೆಂಬಲಿಗರಿಗೆ ತಿಳಿ ಹೇಳಬೇಕು. | ಮಾಲಾಶ್ರೀ ಕಣ್ಣಿ, ಮುಖಂಡೆ ವೀರಶೈವ ಸಮಾಜ

ಹೋರಾಟ ನಿರಂತರ... ಜೇವರ್ಗಿ ಬಾಲಕಿ ಆತ್ಮಹತ್ಯೆ ಪ್ರಕರಣದಲ್ಲಿ ಅನ್ಯಕೋಮಿನ ಕಿಡಿಗೇಡಿಗೆ ಶಿಕ್ಷೆ ಆಗಬೇಕು, ಆಂದೋಲಾ ಶ್ರೀಗಳ ವಿರುದ್ಧ ಸುಳ್ಳು ಕೇಸ್ ವಾಪಸ್ ಪಡೆಯಬೇಕು, ಭಾಲ್ಕಿಯ ದಾಡಗಿ ಬಸವೇಶ್ವರ ಮೂರ್ತಿ ಸ್ಥಳದಲ್ಲಿ ಹೊಸ ಮೂರ್ತಿ ಪ್ರತಿಷ್ಠಾಪಿಸಬೇಕು, ಸಮಾಜದವರ ಮೇಲೆ ದೌರ್ಜನ್ಯ ನಿಲ್ಲಬೇಕು. ಬೇಡಿಕೆಗಳು ಈಡೇರದಿದ್ದರೆ ಸಮಾಜದ ವಿವಿಧ ಸಂಘಟನೆಗಳು ನಿರಂತರ ಹೋರಾಟ ನಡೆಸಲಿವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net