

ಧಾರವಾಡ: ಗದುಗಿನ ವೀರೇಶ್ವರ ಪುಣ್ಯಾಶ್ರಮವು ನಿಜಾರ್ಥದಲ್ಲಿ ಜಾತ್ಯಾತೀತ ತತ್ವ ಪಾಲಿಸುತ್ತಿರುವ ಏಕೈಕ ವಿಶಿಷ್ಟ ಆಶ್ರಮವಾಗಿದೆ. ಇಂತಹ ಶ್ರೇಷ್ಠ ಗುರು ಪರಂಪರೆಯಲ್ಲಿ ಕಠೀಣ ಪರಿಶ್ರಮದಿಂದ ಸಾಧನೆಗೈದು, ಉತ್ಕೃಷ್ಟ ಗಾಯಕರಿಗೆ ತಬಲಾ ಸಹಕಾರ ನೀಡಿದ ಕೀರ್ತಿ ಪಂ.ಹನುಮಂತ ಕಾರಟಗಿ ಅವರಿಗೆ ಸಲ್ಲುತ್ತದೆ ಎಂದು ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಅಭಿಪ್ರಾಯಪಟ್ಟರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಪಂ.ಹನುಮಂತ ಕಾರಟಗಿ ಸಾಂಸ್ಕೃತಿಕ ಕಲಾ ಪ್ರತಿಷ್ಠಾನವು ಈಚೆಗೆ ಏರ್ಪಡಿಸಿದ್ದ ಪಂ.ಹನುಮಂತ ಕಾರಟಗಿಯವರ 4ನೇ ಪುಣ್ಯಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಧಾರವಾಡದ ಶ್ರೇಷ್ಠ ತಬಲಾ ಕಲಾವಿದ ಪಂ.ರಾಚಯ್ಯ ಹಿರೇಮಠ ಅವರಿಗೆ ಪಂ.ಹನುಮಂತ ಕಾರಟಗಿ ಅವರ ಹೆಸರಿನ ಪ್ರಶಸ್ತಿ ಲಭಿಸಿರುವುದು ಔಚಿತ್ಯಪೂರ್ಣವಾದುದು ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಪಂ.ಹನುಮಂತ ಕಾರಟಗಿ ಕಲ್ಯಾಣ ಕರ್ನಾಟಕದ ಪ್ರತಿಭಾನ್ವಿತ ಕಲಾವಿದರು ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ತಮ್ಮ ಕಲೆಯ ಛಾಪು ಮೂಡಿಸಿ, ಪಂ.ಪುಟ್ಟರಾಜ ಗವಾಯಿಗಳ ಹೆಸರನ್ನು ಅಜರಾಮರವಾಗಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಹಿಂದೂಸ್ಥಾನಿ ಗಾಯಕ ಪಂ.ಸೋಮನಾಥ ಮರಡೂರ ಮಾತನಾಡಿ, ಹಿರಿಯ ಕಲಾವಿದರ ಸಾಕಷ್ಟು ಸೇವೆ ಮಾಡಿದ ಶ್ರೇಯಸ್ಸು ಡಾ.ರಾಚಯ್ಯ ಹಿರೇಮಠ ಅವರಿಗೆ ಸಲ್ಲುತ್ತದೆ ಎಂದರು.
ಬೆಂಗಳೂರಿನ ಹಿರಿಯ ಸಂಗೀತ ನಿರ್ದೇಶಕ ಪಂ.ದೇವೇಂದ್ರಕುಮಾರ ಪತ್ತಾರ ಮಾತನಾಡಿದರು. ಕುಮಾರೇಶ್ವರ ಕಲ್ಚರಲ್ ಸೊಸೈಟಿಯ ಸಂಯೋಜಕ ಪ್ರಕಾಶ ಬಾಳಿಕಾಯಿ, ಕಾರಟಗಿಯ ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ, ಹಿರಿಯ ಸಂಗೀತ ನಿರ್ದೇಶಕ ಪಂ. ದೇವೇಂದ್ರಕುಮಾರ ಪತ್ತಾರ, ರಾಧಾ ಹನುಮಂತ ಕಾರಟಗಿ ವೇದಿಕೆಯಲ್ಲಿದ್ದರು.
ಇದೇ ವೇಳೆ ನಾಡಿನ ಹಿರಿಯ ತಬಲಾ ವಾದಕ ಡಾ.ರಾಚಯ್ಯ ಹಿರೇಮಠ ಅವರಿಗೆ ‘ಪಂ.ಹನುಮಂತ ಕಾರಟಗಿ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ಡಾ.ಎ.ಎಲ್.ದೇಸಾಯಿ ಸ್ವಾಗತಿಸಿದರು. ಸ್ವರಸಂವಾದಿನಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರಾಧಾ ಕಾರಟಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಗಮ ಸಂಗೀತ, ತಬಲಾ ಸೋಲೋ, ವಯೋಲಿನ್ ವಾದನ, ಶಹನಾಯಿ ವಾದನ, ಗಾಯನ ಕಾರ್ಯಕ್ರಮ ನಡೆಯಿತು.