ಕೈವಲ್ಯ ಪದ್ಧತಿ ಶಿವಯೋಗ ಶಿವಾನುಭವ

22GDG07
Published on

ವಿಜಯವಾಣಿ ಸುದ್ದಿಜಾಲ ಗದಗ
ಪುಣ್ಯ ಕಾರ್ಯಗಳಿಂದ ಆತ್ಮ ಶುದ್ದಿಯಾಗುತ್ತದೆ. ವಚನ ಬಹಿರಂಗ ಸಾಧನವಾದರೆ, ಉಪದೇಶ ಅಂತರಂಗದ ಸಾಧನವಾಗಿದೆ. ಗುರುಗಳ ವಚನೋಪದೇಶವನ್ನು ಆಲಿಸಿದಾಗ ಮುಕ್ತಿ ದೊರೆಯುತ್ತದೆ ಎಂದು ರನ್ನಬೆಳಗಲಿಯ ಸಿದ್ದಾರೂಡಮಠದ ಪೂಜ್ಯ ಕೃಷ್ಣೆಗೌಡ ಕೋಲೂರು ಅವರು ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಶನಿವಾರ ಜರುಗಿದ ಪಂ. ಪಂಚಾರ ಗವಾಯಿಗಳವರ 80ನೇ ಸ್ವರ ಸಮಾರಾಧನೆ ಹಾಗೂ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 14 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಜರುಗಿದ ಕೈವಲ್ಯ ಪದ್ದತಿ ಶಿವಯೋಗ ಶಿವಾನುಭವದಲ್ಲಿ ಮಾತನಾಡಿ, ಕೈವಲ್ಯ ಪದ್ದತಿಯಲ್ಲಿ ಪಂಚಯೋಗಳಿವೆ ಅವುಗಳಲ್ಲಿ ಹಠಯೋಗ, ಲಯಯೋಗ, ಮಂತ್ರಯೋಗ, ರಾಜಯೋಗ ಹಾಗೂ ಶಿವಯೋಗಳಿವೆ. ಅವುಗಳಲ್ಲಿ ಮೊದಲು ಶಿವಯೋಗ ತಿಳಿಯಬೇಕು. ಅಂತರಂಗ ಬಹಿರಂಗದಿಂದ ಆತ್ಮಶುದ್ದಿ ಆಗಬೇಕಾದರೆ ಗುರು ಉಪದೇಶ ಕೇಳಬೇಕು ಎಂದು ಹೇಳಿದರು.
ಕರಿಕಟ್ಟಿಯ ಕುಮಾರಶಾಸ್ತ್ರಿ ಹಿರೇಮಠ ಅವರು ಮಾತನಾಡಿ, ಯೋಗ ಮಾಡಿದರೆ ಶರೀರ ಗಟ್ಟಿಯಾಗುತ್ತದೆ. ಶಿವಯೋಗ ಮಾಡಿದರೆ ಆತ್ಮ ಗಟ್ಟಿಯಾಗುತ್ತದೆ. ಜೈಲಿನಿಂದ ಬಿಡುಗಡೆಯಾಗುವದು ಮುಕ್ತಿಯಲ್ಲ. ಸಾಲದಿಂದ ಮುಕ್ತನಾಗುವದು ಮುಕ್ತಿಯಲ್ಲ. ರೋಗದಿಂದ ಮುಕ್ತನಾಗುವದು ಮುಕ್ತಿಯಲ್ಲ ಗುರುವಿನ ವಚನೋಪದೇಶದಿಂದ ಜೀವನ ಮುಕ್ತನಾಗಬೇಕು. ಅಂದಾಗ ಮುಕ್ತಿ ಸಿಗುತ್ತದೆ ಎಂದು ಹೇಳಿದರು.
ಬ್ರಹನ್ಮಠದ ಅಭಿನವ ಪಂಚಾರ ಶಿವಾಚಾರ್ಯ ಶ್ರೀಗಳು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿವನ ಸಾಯುಜ್ಯ ಪಡೆಯಲು ಅಂತರಂಗ ಶುದ್ದಿಯಾಗಬೇಕು. ಗಡಗಿ ಒಳಗಿರುವ ಹೆಂಡದ ವಾಸನೆ ಹೋಗಬೇಕಾದರೆ ಗಡಗಿ ಒಳಗೆ ತೊಳೆಯಬೇಕು. ಹೊರಗೆ ತೊಳೆದರೆ ಹೆಂಡದ ವಾಸನೆ ಹೋಗುವದಿಲ್ಲ. ಅದೇರೀತಿ ದೇಹ ಎನ್ನುವ ಗಡಗಿಯನ್ನು ಅಂತರಂಗದ ಒಳಗೆ ತೊಳೆದಾಗ ಮನ, ದೇಹ ಶುದ್ದಿಯಾಗುತ್ತದೆ. ಮನುಷ್ಯ ಜೀವನ ಮುಕ್ತನಾಗಬೇಕಾದರೆ ಶಿವಯೋಗ ಸಾಧನ ಬೇಕೆಂದು ಹೇಳಿದರು.
ರನ್ನಬೆಳಗಲಿಯ ಮಹಾಲಿಂಗ ಶಾಸ್ತ್ರಿಗಳು ಮಾತನಾಡಿದರು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ರುನಂದ ಶಾಸ್ತ್ರಿಗಳು ಅರಳಗುಂಡಿಗಿ, ಕದಮನಹಳ್ಳಿಯ ಪಂಚಾರಿ ಶಾಸ್ತ್ರೀಗಳು, ಸೋಮನಾಳದ ಸಿದ್ರಾಮಯ್ಯಶಾಸ್ತ್ರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net